ಬಾಗಲಕೋಟೆ: ಪೌರತ್ವ ಕಾಯ್ದೆ ವಿರೋಧಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಜಿಲ್ಲೆಯಾದ್ಯಂತ 144 ಜಾರಿಗೊಳಿಸಿ ಆದೇಶನೀಡಿದ್ದಾರೆ. ಜಿಲ್ಲೆಯಲ್ಲಿ ವಾಹನ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಸಹಜ ಸ್ಥಿತಿಯಲ್ಲಿದೆ.
ಬುಧವಾರ ಮಧ್ಯರಾತ್ರಿಯಿಂದಲೇ ಮೂರು ದಿನಗಳ ಕಾಲ ( ಡಿಸೆಂಬರ್ 22ರವರಗೆ) ಸೆಕ್ಷನ್ 144 ಜಾರಿಯಾಗಿದೆ. ಪ್ರತಿಭಟನೆ, ವಿಜಯೋತ್ಸವ, ರಾಜಕೀಯ ಪಕ್ಷಗಳ ಸಭೆ, ಸಮಾರಂಭ ನಡೆಸಲು ನಿರ್ಭಂದಿಸಲಾಗಿದೆ. ಅಲ್ಲದೇ ಇಂದು ಹಾಗೂ ನಾಳೆ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಖಡಕ್ ಸಂದೇಶ ರವಾನಿಸಿದೆ.
Advertisement
ಎಂದಿನಂತೆ ಅಂಗಡಿ ಮುಂಗಟ್ಟು ತೆರೆದಿದ್ದು, ಖಾಸಗಿ ಹಾಗೂ ಕೆ.ಎಸ್.ಆರ್.ಟಿಸಿ ಬಸ್ ಸಂಚಾರ ಸಹ ಸುಗಮವಾಗಿದೆ. ವಿದ್ಯಾರ್ಥಿಗಳು ಎಂದಿನಂತೆ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಇಂದು 11 ಗಂಟೆಗೆ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಆಲೋಚನೆಯಲ್ಲಿವೆ, ಶಾಂತಿ ಕಾಪಾಡುವ ಸಲುವಾಗಿ ಸಮರ್ಥನಾ ಜಾಥಾಗೂ ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ. ಅಲ್ಲದೇ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದಾರೆ.