– ಪ್ರಧಾನಿ ಇಲ್ಲಿಗೆ ಬಂದೇ ಪರಿಹಾರ ಕೊಡ್ಬೇಕಾ?
– ಹೆಚ್‍ಡಿಕೆ ವಿರುದ್ಧ ಕಿಡಿ
ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಿಯೇ ಕಟ್ಟುತ್ತೇವೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಳೇದಗುಡ್ಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮಾನವೇ ಬೇಡ, ನೂರಕ್ಕೆ ನೂರು ರಾಮ ಮಂದಿರ ಕಟ್ಟಿಯೇ ಕಟ್ಟುತ್ತೇವೆ. ಸುಪ್ರೀಂ ಕೋರ್ಟ್ ರಾಮ ಮಂದಿರದ ಪರವಾಗಿಯೇ ತೀರ್ಪು ಕೊಡಬೇಕು. ಅದನ್ನ ಬಿಟ್ಟು ಸುಪ್ರೀಂ ಕೋರ್ಟಿಗೆ ಬೇರೆ ದಾರಿಯೇ ಇಲ್ಲ. ಅಲ್ಲಿರುವ ಎಲ್ಲ ದಾಖಲೆಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಈಗಿರುವ ರಾಮನ ಮೂರ್ತಿ ಜಾಗ ರಾಮ ಮಂದಿರನೇ ಎಂದು ಹಿಂದಿನ ಹೈಕೋರ್ಟ್ ಹೇಳಿದೆ. ಈಗ ಅದನ್ನ ಬದಲು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
Advertisement
Advertisement
ಇದೇ ವೇಳೆ ಬಿಹಾರ ಪ್ರವಾಹಕ್ಕೆ ಪ್ರಧಾನಿ ಟ್ವೀಟ್ ಮಾಡುತ್ತಾರೆ, ಆದರೆ ಕರ್ನಾಟಕಕ್ಕೆ ಬಂದೂ ಇಲ್ಲ, ಟ್ವೀಟೂ ಮಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಇಲ್ಲಿಗೆ ಬಂದೇ ಪರಿಹಾರ ಕೊಡಬೇಕಾ ಎಂದು ಪ್ರಶ್ನಿಸಿದರು. ಅಮಿತ್ ಶಾ ಬಂದು ವರದಿ ಮಾಡಿದ್ದಾರೆ, ಸಾಕು. ಪ್ರಧಾನಿ ಮೋದಿ ವಿಶ್ವನಾಯಕ. ಪ್ರತಿ ಹಂತದಲ್ಲೂ ಇಲ್ಲಿಗೆ ಬರಬೇಕು ಅನ್ನೋ ಅಪೇಕ್ಷೆ ಏಕೆ ಎಂದು ಮರು ಪ್ರಶ್ನೆ ಹಾಕಿದ ಭಟ್, ಏನು ಬರಬೇಕಿದೆ. ಅದು ಬಂದಿದೆ ಸಾಕು ಎಂದರು.
Advertisement
ಪ್ರಧಾನಿ ನನಗೆ ಸ್ಪಂದಿಸಿದ್ದರು ಆದರೆ ಯಡಿಯೂರಪ್ಪ ಅವರಿಗೆ ಪ್ರಧಾನಿ ಯಾಕೆ ಸ್ಪಂದಿಸ್ತಿಲ್ಲ ಎಂಬ ಹೆಚ್ ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಪ್ರಭಾಕರ ಭಟ್, ನಾನು ಹೋದಾಗ ಪ್ರಧಾನಿ ಸ್ಪಂದಿಸಿದ್ದರು ಎಂದು ಕುಮಾರಸ್ವಾಮಿ ಅವತ್ತೇ ಯಾಕೆ ಹೇಳಲಿಲ್ಲ?. ಅಂದು ಕೇಂದ್ರ ಸರ್ಕಾರ ನನಗೆ ಬೆಂಬಲ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ನಮ್ಮ ವಿರುದ್ಧವಾಗಿ ನಿಂತುಕೊಂಡಿದೆ ಎಂದು ಬೊಬ್ಬೆ ಹೊಡೆದ ಆ ಮನುಷ್ಯ ಇವತ್ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಸ್ಪಂದಿಸದೇ ಇದ್ದಿದ್ದರೆ 1200 ಕೋಟಿ ರೂ. ಬಿಡುಗಡೆ ಆಗಿದ್ದೇಗೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದರು. ಅಲ್ಲದೆ ಯಡಿಯೂರಪ್ಪ ಹೋದ ಮೇಲೆ ಮಾತಾಡಿದ್ದಾರೆ, ಅದಾದ ಮೇಲೆ 1,200 ಕೋಟಿ ರೂ. ಬಂದಿದೆ ಎಂದರು. ಇದನ್ನೂ ಓದಿ: ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್
Advertisement
ಪ್ರಧಾನಿ ಮೋದಿ ಒಬ್ಬ ಒಳ್ಳೆಯ ಮನುಷ್ಯ. ನಾವು ಹೋದಾಗ ಭಾರೀ ಸತ್ಕಾರದಿಂದ ಸ್ವಾಗತ ಮಾಡಿದ್ರು, ನಾವು ಕೇಳಿದ್ದನ್ನೆಲ್ಲ ಕೊಟ್ಟಿದ್ದಾರೆ ಎಂದು ಇವರು(ಎಚ್‍ಡಿಕೆ) ಅವತ್ತೇ ಯಾಕೆ ಹೇಳ್ಲಿಲ್ಲ?. ಇವರೆಲ್ಲ ರಾಜಕೀಯ ಮಾಡುತ್ತಿದ್ದಾರೆ. ಮೊನ್ನೆ ಪ್ರವಾಹ ಆಯ್ತಲ್ಲ, ಅಲ್ಲಿಗೆ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡ ಹೋಗಿದ್ದಾರಾ?. ನಾನು ನೋಡಿದ ಒಳ್ಳೆಯ ಸಿಎಂ, ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿದ್ದಾರೆ ಎಂದು ಬಿಎಸ್‍ವೈ ಪರ ದೇವೇಗೌಡ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆದರೆ ಇಂತಹ ಒಳ್ಳೆಯ ಮಾತುಗಳನ್ನಾಡುವ ಯೋಗ್ಯತೆನೂ ಇವರಿಗೆ ಇಲ್ಲ ಎಂದು ಕಿಡಿಕಾರಿದರು.