ಬಾಗಲಕೋಟೆ: ಶಾಲಾ ಆವರಣದಲ್ಲಿದ್ದ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ನಡೆದಿದೆ.
8 ವರ್ಷದ ಗಣೇಶ್ ನಡಕಟ್ಟಿ ಸಾವಿಗೀಡಾದ ಬಾಲಕ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಟವಾಡಲು ಹೋಗಿದ್ದ ವೇಳೆ, ಕೊಠಡಿ ನಿರ್ಮಾಣಕ್ಕಾಗಿ ತೋಡಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಆಟವಾಡುವ ವೇಳೆ ಗಣೇಶ್ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ.
ಮಳೆಯಾದ ಪರಿಣಾಮ ಕೊಠಡಿ ನಿರ್ಮಾಣಕ್ಕೆ ತೆಗೆಸಿದ್ದ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಯಾಗಿತ್ತು. ಈ ಹಿಂದೆಯೂ ಕೆಲ ಬಾಲಕರು ಗುಂಡಿಯಲ್ಲಿ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಶಾಲಾ ಸಿಬ್ಬಂದಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹ ಮಾಡಿದ್ದಾರೆ. ಮೃತ ಬಾಲಕನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.