ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯ ಗ್ರಾಮಸ್ಥರು ಆಂಜನೇಯನ ಮೊರೆ ಹೋಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮಸ್ಥರು ಮಹಾರಾಷ್ಟ್ರದಲ್ಲಿ ಮಳೆ ನಿಲ್ಲಲಿ ಎಂದು ಆಂಜನೇಯನ ಬಳಿ ಬೇಡಿಕೊಂಡಿದ್ದಾರೆ. ಮಹಾ ಮಳೆ ನಿಲ್ಲಲಿ, ಕೃಷ್ಣಾ ನದಿಯ ಪ್ರವಾಹ ತಗ್ಗಲಿ ಎಂದು ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯನಿಗೆ ಕರ್ಪೂರ, ಊದುಬತ್ತಿ ಹಾಗೂ ಕಾಯಿ ಒಡೆದು ಬೇಡಿಕೊಂಡಿದ್ದಾರೆ.
Advertisement
Advertisement
ಜಮಖಂಡಿ ತಾಲೂಕಿನ 15ಕ್ಕೂ ಹೆಚ್ವು ಹಳ್ಳಿಗಳು ಜಲಾವೃತವಾಗಿ, ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ. ಜಮಖಂಡಿ ಜತ್ತ ರಾಜ್ಯ ಹೆದ್ದಾರಿ ಬಂದ್ ಆಗಿದ್ದರಿಂದ ಜನರಿಗೆ ಆತಂಕ ಎದುರಾಗಿದೆ.
Advertisement
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ರಸ್ತೆ ಸೇತುವೆ ವ್ಯಾಪ್ತಿಯಲ್ಲಿ ಸೋಮವಾರದಿಂದಲೇ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ಜನ ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತಿದ್ದು, ಗುಂಪು ಗುಂಪಾಗಿ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನಿಷೇಧಾಜ್ಞೆ ಇದ್ದರೂ ಜಲಾಶಯದ ಪಕ್ಕದ ನೀರಲ್ಲಿ ಸ್ಥಳೀಯರು ಈಜಾಡಿದ್ದಾರೆ.
Advertisement
ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಚಿಕ್ಕಪಡಸಲಗಿ ರಸ್ತೆ ಸೇತುವೆ ಜಲಾವೃತವಾಗಲು ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ 34 ರ ರಸ್ತೆ ಸೇತುವೆಗೆ ತೆರೆಗಳು ರಭಸವಾಗಿ ಅಪ್ಪಳಿಸುತ್ತಿದೆ.
ಇಷ್ಟು ಮಾತ್ರವಲ್ಲದೆ ಜಮಖಂಡಿ ತೀರದ ಕೃಷ್ಣಾ ನದಿಯಲ್ಲಿ ಹೆಚ್ಚಾದ ಪ್ರವಾಹದಿಂದಾಗಿ ಶೂರ್ಪಾಲಿ ಗ್ರಾಮದ ಪ್ರಸಿದ್ಧ ಐತಿಹಾಸಿಕ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ನೀರು ಹೆಚ್ಚಾದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ನಿರ್ಮಿಸಿದ್ದ ತಡೆಗೋಡೆ ಮೂಲಕ ನೀರು ಹರಿಯುತ್ತಿದ್ದು, ನೀರು ಇಡೀ ದೇವಸ್ಥಾನವನ್ನ ಆವರಿಸಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ನೀರಿನಿಂದಾಗಿ ಜನ ಆತಂಕಕ್ಕೀಡಾಗಿದ್ದಾರೆ.
ಮುಧೋಳ ತಾಲೂಕಿನಲ್ಲೂ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಅಂದಾಜು 10 ಅಡಿ ನೀರು ಹೆಚ್ಚಳವಾಗಿದೆ. ಪರಿಣಾಮ ನದಿ ಪಾತ್ರದ ಗ್ರಾಮಗಳಲ್ಲಿ ಜನ ಭಯಭೀತರಾಗಿದ್ದಾರೆ.