ಬಾಗಲಕೋಟೆ: ಪ್ರವಾಹದ ಭೀಕರತೆ ಮಧ್ಯೆಯೂ ತೆಪ್ಪದ ಮೂಲಕ ತೆರಳಿ ಧ್ವಜಾರೋಹಣ ಮಾಡಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿಯ ಜನರು ದೇಶಪ್ರೇಮ ಮರೆದಿದ್ದಾರೆ.
ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಶೂರ್ಪಾಲಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿತ್ತು. ಗ್ರಾಮಕ್ಕೆ ಮೂರು ಕಡೆಯಿಂದಲೂ ನೀರು ಆವರಿಸಿ, ಗ್ರಾಮದ ಎತ್ತರದ ಪ್ರದೇಶ ಮಾತ್ರ ನಡುಗಡ್ಡೆಯಾಗಿ ಉಳಿದಿತ್ತು. ಆದರೆ ಈ ಸಂಕಷ್ಟದ ನಡುವೆಯೂ ನೇತಾಜಿ ಯುವಕ ಸಂಘದ ಸದಸ್ಯರು ನೀರಿನಲ್ಲಿ ತೆಪ್ಪದ ಮೂಲಕ ತೆರಳಿ ಧ್ವಜಾರೋಹಣ ನೆರವೇರಿಸಿದ್ದಾರೆ. ಗ್ರಾಮಪಂಚಾಯತ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಧ್ವಜಾರೋಹಣ ಮಾಡಿ ದೇಶಪ್ರೇಮವನ್ನ ಮೆರೆದಿದ್ದಾರೆ.
Advertisement
Advertisement
ಇತ್ತ ಪ್ರವಾಹಪೀಡಿತ ಕೂಡಲಸಂಗಮದಲ್ಲಿ ಕೂಡ ನೀರಿನಲ್ಲಿಯೇ ನಿಂತು ಯುವಕರು ಧ್ವಜಾರೋಹಣ ಮಾಡಿ ದೇಶಭಕ್ತಿ ಮೆರೆದಿದ್ದಾರೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಜಲಾವೃತವಾಗಿದೆ. ಆದರೂ ಪ್ರವಾಹವನ್ನು ಲೆಕ್ಕಿಸದೆ ನೀರಿನಲ್ಲಿ ನಿಂತು ಧ್ವಜಾರೋಹಣ ಮಾಡಿ, ಸೆಲ್ಯೂಟ್ ಹೊಡೆದು ಯುವಕರು ರಾಷ್ಟ್ರಗೀತೆ ಹಾಡಿ ಖುಷಿಪಟ್ಟಿದ್ದಾರೆ.
Advertisement
73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಡೀ ದೇಶವೇ ಹೆಮ್ಮೆಯಿಂದ ಆಚರಿಸುತ್ತಿದೆ. ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟ ಎದುರಿಸುತ್ತಿದ್ದರೂ ದೇಶಪ್ರೇಮವನ್ನು ಮಾತ್ರ ಮರೆತಿಲ್ಲ. ಅದರಲ್ಲೂ ಬಾಗಲಕೋಟೆ ಜನರು ಪ್ರವಾಹದ ಮಧ್ಯೆಯೂ ದೇಶಭಕ್ತಿ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.