-ಮನಸ್ಸು ಮಾಡಿದ್ರೆ ಅಂಬೇಡ್ಕರ್ ಇಸ್ಲಾಂ ಧರ್ಮ ಸೇರುತ್ತಿದ್ರು
ಬಾಗಲಕೋಟೆ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನದವರು ತೆಗೆದುಕೊಂಡು ಭೂಗತ ಪಾತಕಿ ದಾವೂದ್ ಹಾಗೂ ಇನ್ನೊಬ್ಬ ಸಹಚರನನ್ನು ಭಾರತಕ್ಕೆ ಕೊಡಲಿ. ಆಗ ನಾವು ಎರಡು ಹೆಜ್ಜೆ ಮುಂದೆ ಬಂದು ಸ್ನೇಹ ಹಸ್ತ ಚಾಚುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭಾರತದ ಬಗ್ಗೆ ದೇಶಭಕ್ತಿ ಇದ್ದರೆ ನವಜೋತ್ ಸಿಂಗ್ ಅವರನ್ನು ಪಕ್ಷದಿಂದ ತಕ್ಷಣವೇ ವಜಾ ಮಾಡಲಿ. ಅಷ್ಟೇ ಅಲ್ಲದೆ ದೇಶದ್ರೋಹಿ ಪ್ರಕರಣದಡಿ ಅವರ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಬಾರಿ ಒಳ್ಳೆಯಕಾಲ ಆರಂಭವಾಗಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ವಿರೋಧ ಮಾಡುವುದನ್ನು ಕಡಿಮೆ ಮಾಡಿವೆ. ರಾಮನ ಶಕ್ತಿ ಏನು ಎನ್ನುವುದು ಎಲ್ಲ ಪಕ್ಷ ಹಾಗೂ ಜನಾಂಗದವರಿಗೆ ಗೊತ್ತಾಗಿದೆ. ಅಯೋಧ್ಯೆ, ಮಥುರಾ ಹಾಗೂ ಕಾಶಿಯಲ್ಲಿ ಕೃಷ್ಣ ಮಂದಿರ, ರಾಮ ಮಂದಿರ, ವಿಶ್ವನಾಥ್ ಮಂದಿರ ನಿರ್ಮಾಣವಾಗಬೇಕೆಂದು ಹಿಂದೂಗಳ ಭಾವನೆಯಾಗಿದೆ ಎಂದರು.
Advertisement
ಕೆಲವು ಮುಸ್ಲಿಂ ಏಜೆಂಟರು ಈ ದೇಶದಲ್ಲಿದ್ದಾರೆ. ಅವರು ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರು ಎಂದಿಗೂ ಹಿಂದೂಗಳ ಭಾವನೆಗೆ ನೋವಾಗದಂತೆ ನಡೆದುಕೊಂಡಿಲ್ಲ. ಒಂದು ವೇಳೆ ಅವರು ಮನಸ್ಸು ಮಾಡಿದ್ದರೆ ಇಸ್ಲಾಂ ಧರ್ಮವನ್ನೇ ಸ್ವೀಕಾರ ಮಾಡುತ್ತಿದ್ದರು. ಆದರೆ ಹಿಂದೂ ಧರ್ಮದ ಅಂಗವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಕೆಲವರು ದಲಿತ ಹಾಗೂ ಅಲ್ಪಸಂಖ್ಯಾತ ಒಕ್ಕೂಟ ಮಾಡಿಕೊಂಡು ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತ ಭಾಷಣದಲ್ಲಿ ಹೇಳುತ್ತಾರೆ. ಅಲ್ಲದೇ ರಾಮಮಂದಿರ ನಿರ್ಮಾಣ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ರುಂಡ ಕತ್ತರಿಸುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.
Advertisement
ನಾವು ಹಿಂದೂಗಳೇನು ಬಳೆ ತೊಟ್ಕೊಂಡಿದ್ದಿವಾ? ಓವೈಸಿ ಅವರಪ್ಪನಂತಹ ಸಂಘಟನೆಗಳು ಹಿಂದೂಗಳಲ್ಲಿವೆ. ಯಾರು ರುಂಡ ಯಾರೂ ಕಡಿಯುತ್ತಾರೆ ಅಂತ ನಾವೂ ನೋಡುತ್ತೇವೆ. ನಮಗೂ ತಾಕತ್ತಿದೆ. ರುಂಡ ಅಲ್ಲ, ಈ ದೇಶದಲ್ಲಿರದಂತೆ ನೋಡಿಕೊಳ್ಳುತ್ತೇವೆ ಎಂದು ಶಾಸಕರು, ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿದರು.
ಸಂಪುಟ ವಿಸ್ತರಣೆಯಾದರೂ, ಆಗದಿದ್ದರೂ ಸರ್ಕಾರ ಬೀಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ನಾವು ರೆಸಾರ್ಟ್ ರಾಜಕಾರಣದಿಂದ ದೂರ ಇರುತ್ತೇವೆ. ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ಹೆಸರು ಕೆಡಿಸುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಟೇಪ್ ಹಗರಣಕ್ಕೆ ಸಂಬಂಧಪಟ್ಟಂತೆ, ತಾಕತ್ತಿದ್ದರೆ ಧ್ವನಿ ಪರೀಕ್ಷೆ ಮಾಡಲಿ. ಅದು ಯಾರದು ಎಂಬ ಸತ್ಯ ಹೊರಬೀಳಲಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv