ಬಾಗಲಕೋಟೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಸೊಲ್ಲಾಪುರದಲ್ಲಿ ಪತ್ತೆ – ಪ್ರಕರಣಕ್ಕೆ ಟ್ವಿಸ್ಟ್

Public TV
1 Min Read
POLICE 15

ಬಾಗಲಕೋಟೆ: ನಗರದಲ್ಲಿ ನಾಲ್ವರು ಮಕ್ಕಳು ದಿಢೀರ್ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅವರಲ್ಲಿ ಮೂವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪತ್ತೆಯಾಗಿದ್ದಾರೆ.

ಇಲ್ಲಿನ ನವನಗರದ 28ನೇ ಸೆಕ್ಟರ್ ನಿವಾಸಿಗಳಾಗಿದ್ದ ಗೌತಮ್ ಸೂರ್ಯವಂಶಿ(12), ಪ್ರೀತಿಮ ಸೂರ್ಯವಂಶಿ(10) ಹಾಗೂ ಪ್ರಜ್ವಲ್ (8) ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕ ರಾಜು ಗೌಡರ್(10) ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾದ ಮರುದಿನವೇ ಮಕ್ಕಳನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?:
ನಾಲ್ವರು ಮಕ್ಕಳು ಶನಿವಾರ ಶಾಲೆಗೆ ತೆರಳಿದ್ದರು. ಆದರೆ ಸಂಜೆ ಕಳೆದರೂ ಮನೆಗೆ ಬಾರದೇ ಇದ್ದರಿಂದ ಕಂಗಾಲಾದ ಪೋಷಕರು ಶಾಲೆ, ಸ್ನೇಹಿತ ಮನೆ ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಮಕ್ಕಳ ಸುಳಿವು ಸಿಗದೇ ಇದ್ದಾಗ ತಡರಾತ್ರಿ ನವನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪೋಷಕರಿಂದ ದೂರು ಪಡೆದ ಪೊಲೀಸರು ಮಕ್ಕಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದರು. ಈ ವೇಳೆ ನಾಪತ್ತೆಯಾದ ಮಕ್ಕಳು ಟಿಕೆಟ್ ಇಲ್ಲದೇ ರೈಲಿನಲ್ಲಿ ಸೊಲ್ಲಾಪುರ ಕಡೆಗೆ ಪ್ರಯಾಣ ಬೆಳೆಸಿದ ಮಾಹಿತಿ ಲಭಿಸಿತ್ತು.

Indian Railway Train

ನಾಲ್ವರು ಮಕ್ಕಳಲ್ಲಿ, ಗೌತಮ್, ಪ್ರಜ್ವಲ್, ಪ್ರೀತಮ್ ಮಕ್ಕಳು ರೇಲ್ವೇ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ ರಾಜು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸಿಕ್ಕಿಬಿದ್ದ ಮಕ್ಕಳನ್ನು ವಿಚಾರಣೆ ಮಾಡಿದಾಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜು ಗೌಡರ್ ಎಂಬ ಬಾಲಕನೇ ಮಕ್ಕಳನ್ನ ಸೊಲ್ಲಾಪುರಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದ ಎನ್ನುವ ಸತ್ಯ ಹೊರಬಿದ್ದಿದೆ.

ರೈಲ್ವೇ ಪೊಲೀಸರು, ಸೊಲ್ಲಾಪುರ ಪೊಲೀಸರ ಮೂಲಕ ಸಿಕ್ಕ ಮೂವರು ಮಕ್ಕಳನ್ನು ನವನಗರ ಠಾಣೆಗೆ ಒಪ್ಪಿಸಿದ್ದಾರೆ. ಮಕ್ಕಳ ಈ ನಾಪತ್ತೆ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಲಾರಂಭಿಸಿದ್ದು, ಪರಾರಿಯಾದ ಬಾಲಕನನ್ನು ಹಿಡಿದಾಗ ಸತ್ಯ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *