-ಕೆಲಸ ಮಾಡಿದವರಿಗೆ ವೋಟ್ ಹಾಕ್ತಿರೋ? ಸುಳ್ಳು ಹೇಳೋರಿಗೆ ಅವಕಾಶ ಕೊಡತಿರೋ?
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದರೂ ಸತ್ಯದ ತಲೆ ಮೇಲೆ ಹೊಡಿದಂಗೆ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರದ ಸಾವಳಗಿ ಗ್ರಾಮದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಅವರು, ಉದ್ಯೋಗ ಕೊಡುತ್ತೇನೆ ಅಂತ ಹೇಳಿ, ಯುವಕರಿಗೆ ಮೋಸ ಮಾಡಿದರು. ವಿದೇಶದಲ್ಲಿರುವ ಕಪ್ಪು ಹಣ ತಂದು, ದೇಶದ ಸಾಮಾನ್ಯ ಜನತೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಯಾರಿಗಾದರೂ ಹಣ ಹಾಕಿದ್ದಾರಾ? ಸಾವಳಗಿ ಜನರಿಗೆ ಏನಾದರು ಕೊಟ್ಟಿದ್ದಾರಾ ಎಂದು ಪ್ರಶ್ನಿಸಿ ಲೇವಡಿ ಮಾಡಿದರು.
ಬಿಜೆಪಿಯವರು ಸಂವಿಧಾನ ತಿದ್ದಪಡಿ ಮಾಡಬೇಕು. ತೆಗೆದುಹಾಕಬೇಕು ಅಂತಿದ್ದಾರೆ. ಅದು ಅವರಿಂದ ಸಾಧ್ಯವಿಲ್ಲ. ಬಿಜೆಪಿ ಆಡಳಿತದಿಂದಾಗಿ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕಷ್ಟದಲ್ಲಿವೆ ಎಂದ ಅವರು, ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟಿದೆ. ಈ ವೇಳೆ ನಮ್ಮವರು ಪ್ರಾಣತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪ್ರಜಾಪ್ರಭುತ್ವ ಮತ್ತು ಸಮಾಜಕ್ಕಾಗಿ ಕಾಂಗ್ರೆಸ್ ಕೆಲಸ ಮಾಡಿದೆ. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ರೈತರನ್ನು ಉದ್ಧಾರ ಮಾಡುವವರು ಎಲ್ಲಿ ಹೋದರು? ಪ್ರಧಾನಿ ಮೋದಿ ಬಗ್ಗೆ ಪ್ರಚಾರ ಮಾಡುವ ಛೇಲಾಗಳು ಎಲ್ಲಿಗೆ ಹೋದರು ಎಂದು ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಕಿಡಿಕಾರಿದರು.
ಕೆಲಸ ಮಾಡಿದವರಿಗೆ ವೋಟ್ ಹಾಕುತ್ತಿರಾ? ಅಥವಾ ಸುಳ್ಳು ಹೇಳುವವರಿಗೆ ಮತದಾನ ಮಾಡುತ್ತಿರಾ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ರಫೆಲ್ ಯುದ್ಧ ವಿಮಾನಗಳ ಖರೀದಿ ಹಗರಣವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಯಲಿಗೆಳೆದರು. ಜೊತೆಗೆ ಕೇಂದ್ರ ಮಾಜಿ ಸಚಿವ ಜಶವಂತ್ ಸಿನ್ಹಾ ಸೇರಿದಂತೆ ಕೆಲ ನಾಯಕರು ಸಿಬಿಐಗೆ ದೂರು ದಾಖಲಿಸಿದರು. ಹೀಗಾಗಿ ಬಿಜೆಪಿಯವರಿಗೆ ಪುಕು.. ಪುಕು.. ಶುರುವಾಯಿತು ಎಂದು ಲೇವಡಿ ಮಾಡಿದರು.
ರಫೆಲ್ ಯುದ್ಧ ವಿಮಾನ ಹಗರಣ ತಮ್ಮ ಬುಡಕ್ಕೆ ಬರುತ್ತದೆ ಅಂತಾ ರಾತ್ರೋ ರಾತ್ರಿ ಸಿಬಿಐ ನಿರ್ದೇಶಕರನ್ನು ತೆಗೆದು ಹಾಕಿದರು ಎಂದು ಆರೋಪಿಸಿದ ಮಲ್ಲಿಕಾರ್ಜುನ ಖರ್ಗೆ, ಗೋವುಗಳ ಚರ್ಮ ಸುಲಿಯುವ ದಲಿತರಿಗೆ ಗೋವು ಕಳ್ಳರೆಂದು ಹಲ್ಲೆ ಮಾಡಿದರು. ಆದರೂ ಪ್ರಧಾನಿ ನರೇಂದ್ರ ಮೋದಿ ಒಂದು ಮಾತು ಆಡಲಿಲ್ಲ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv