ಬಾಗಲಕೋಟೆ: ಜಮಖಂಡಿ ಹೊಸ ಜಿಲ್ಲೆ ಮಾಡಬೇಕು ಎಂಬ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಇಂದು ಜಮಖಂಡಿ ನಗರ ಬಂದ್‍ಗೆ ಕರೆ ನೀಡಲಾಗಿದೆ.
ಜಮಖಂಡಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಿದ್ದು, ಅಂಗಡಿಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಇದರ ಜೊತೆಗೆ ಬಸ್ ಸಂಚಾರ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಇಂದು ಬಂದ್ ಆಗಲಿದೆ.
ಈ ಬಂದ್‍ನಲ್ಲಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಂದ್‍ನಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಭಾಗಿಯಾಗಲಿದ್ದು, ಜಮಖಂಡಿ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಮತ್ತು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಭಾಗಿಯಾಗಲಿದ್ದಾರೆ.
ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಯಲಿದ್ದು, ಹೋರಾಟದ ನೇತೃತ್ವವನ್ನು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿ ಸದಸ್ಯರು, ಜಮಖಂಡಿ ಭಾಗದ 25ಕ್ಕೂ ಹೆಚ್ಚು ಮಠಾಧೀಶರು ಮತ್ತು ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನಾ ರ್ಯಾಲಿ ಶುರುವಾಗಲಿದ್ದು, ಹನುಮಾನ ಚೌಕದಿಂದ ದೇಸಾಯಿ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ಸಾಗಲಿದೆ.
ಈಗಾಗಲೇ ಹೊಸ ಜಿಲ್ಲೆ ಹೋರಾಟಕ್ಕೆ ಶಾಸಕರಾದ ಆನಂದ ನ್ಯಾಮಗೌಡ ಮತ್ತು ಸಿದ್ದು ಸವದಿ ಬೆಂಬಲಿಸೋದಾಗಿ ಹೇಳಿದ್ದು, ನಾಳೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಹೋರಾಟಗಾರರು ಸಿಎಂಗೆ ಹೊಸ ಜಿಲ್ಲೆ ಮಾಡಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.