ಬಾಗಲಕೋಟೆ: ಯುವಕರಿಬ್ಬರ ಮಧ್ಯೆ ನಡೆದ ಜಗಳ ಗುಂಪು ಘರ್ಷಣೆಗೆ ಕಾರಣವಾಗಿ ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ್ದಾರೆ.
ಬಾದಾಮಿ ಪಟ್ಟಣದಲ್ಲಿ ಈ ಘಟನೆ ಜರುಗಿದ್ದು, ಬೈಕ್ ಸೈಡ್ ತೆಗೆದುಕೊಳ್ಳುವ ವಿಚಾರಕ್ಕೆ ಇಬ್ಬರು ಯುವಕರ ಮಧ್ಯೆಗಿನ ಜಗಳ ಗುಂಪು ಘರ್ಷಣೆಗೆ ಕಾರಣವಾಗಿದೆ. ಬಾದಾಮಿ ಪಟ್ಟಣದಲ್ಲಿ ಯುವಕರಿಬ್ಬರು ಬೈಕ್ ಸೈಡ್ ತಗೆದುಕೊಳ್ಳುವ ವಿಚಾರವಾಗಿ ಪ್ರತಿಷ್ಟೆಗೆ ಬಿದ್ದಿದ್ದಾರೆ, ನಂತರ ಜಗಳ ಮಾಡಿಕೊಂಡಿದ್ದಾರೆ.
ಇದೇ ವಿಚಾರ ಅವರಿಬ್ಬರ ಏರಿಯಾಗಳ ಜನರ ನಡುವೆ ಘರ್ಷಣೆಗೆ ಕಾರಣವಾಗಿದೆ. ಬಾದಾಮಿ ಪಟ್ಟಣದ ತಟಕೋಟಿಗಲ್ಲಿ ಹಾಗೂ ಕಿಲ್ಲಾ ಗಲ್ಲಿಯ ಜನರೇ ಆ ಯುವಕರಿಂದಾಗಿ ಗುಂಪು ಘರ್ಷಣೆ ಮಾಡಿದ್ದಾರೆ. ಸುದ್ದಿ ತಿಳಿದ ಬಾದಾಮಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಲು ಲಘುಲಾಠಿ ಪ್ರಹಾರ ಸಹ ನಡೆಸಿದ್ದಾರೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಇದ್ದು ಪೊಲೀಸರು ಅಲ್ಲೇ ಬೀಡು ಬಿಟ್ಟಿದ್ದಾರೆ.