ಬಾಗಲಕೋಟೆ: ಮನೆಯಲ್ಲಿ ಬಿಟ್ಟು ಬಂದಿರುವ ನನ್ನ ಪತಿಯ ಫೋಟೋ ತಂದುಕೊಡಿ ಎಂದು ನಿರಾಶ್ರಿತರ ಶಿಬಿರದಲ್ಲಿರುವ ವೃದ್ಧೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಕೃಷ್ಣಾ ನದಿಯ ಪ್ರವಾಹದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಸಂಪೂರ್ಣ ಜಲಾವೃತವಾಗಿದೆ. ಹಿರೇಪಡಸಲಗಿ ಜನರನ್ನು ಅಧಿಕಾರಗಳು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ಆದರೆ ಪ್ರವಾಹದಿಂದ ಪಾರಾಗಿ ಬಂದ ವೃದ್ಧೆಯೊಬ್ಬರು ತನ್ನ ಮನೆಯಲ್ಲಿ ತೀರಿಕೊಂಡ ಪತಿಯ ಫೋಟೋವನ್ನು ಬಿಟ್ಟು ಬಂದಿದ್ದು, ಅದನ್ನು ತಂದುಕೊಡುವಂತೆ ಅಧಿಕಾರಿಗಳಲ್ಲಿ ಕೇಳಿದ್ದಾರೆ.
ಹಿರೇಪಡಸಲಗಿ ಸಂಪೂರ್ಣ ನಡುಗದ್ದೆಯಾದ ಪರಿಣಾಮ ವೃದ್ಧೆ ಶಾಂತಾಬಾಯಿ ಗೌಡಗಾವಿಯ ಮನೆ ಜಲಾವೃತವಾಗಿದೆ. ಅದ್ದರಿಂದ ಅಧಿಕಾರಿಗಳು ವೃದ್ಧೆಯನ್ನು ಗಂಜಿ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ಬರುವಾಗ ಮನೆಯಲ್ಲಿದ್ದ ತನ್ನ ಗಂಡ ದಿವಂಗತ ಧರ್ಮಣ್ಣ ಗೌಡಗಾವಿ ಅವರ ಫೋಟೋ ಬಿಟ್ಟು ಬಂದಿದ್ದಾರೆ. ಅದ್ದದಿಂದ ಈಗ ಕಣ್ಣೀರು ಹಾಕುತ್ತಿರುವ ವೃದ್ಧೆ ನೀವು ತಂದು ಕೊಡಿ, ಇಲ್ಲವೇ ನಾನೇ ವಾಪಸ್ ಹೋಗಿ ತರುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.
ಈಗ ಸದ್ಯ ಹಿರೇಪಡಸಲಗಿ ಗಂಜಿ ಕೇಂದ್ರದಲ್ಲಿರುವ ಶಾಂತಾಬಾಯಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಧಿಕಾರಿಗಳು ವೃದ್ಧೆಯ ಗಂಡನ ಭಾವಚಿತ್ರ ತಂದುಕೊಡುವುದಾಗಿ ಹೇಳಿ ಸಂತೈಸಿದ್ದಾರೆ.