Connect with us

Bagalkot

ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಶುರುವಾಗಿದೆ ಕಾಯಕಲ್ಪ ಕಾರ್ಯ

Published

on

– ಶಿಕ್ಷಣ ಇಲಾಖೆಯ ಕೆಲಸಕ್ಕೆ ಗ್ರಾಮಸ್ಥರ ಮೆಚ್ಚುಗೆ

ಬಾಗಲಕೋಟೆ: ನೆರೆ ಹಾವಳಿಗೆ ತುತ್ತಾಗಿದ್ದ ಜಿಲ್ಲೆಯ ನಾನಾ ಕಡೆಗಳಲ್ಲಿನ ಶಾಲಾ ಕಟ್ಟಡಗಳ ಕಾಯಕಲ್ಪ ಕಾರ್ಯ ಹಲವು ಆರೋಪಗಳ ಮಧ್ಯೆಯೂ ಭರದಿಂದ ಸಾಗುತ್ತಿದೆ.

ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ಉಂಟಾದ ನೆರೆಯಿಂದ ಸಾವಿರಾರು ಮನೆ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಶಾಲಾ ಕಟ್ಟಡಗಳೂ ಅನೇಕ ಕಡೆಗಳಲ್ಲಿ ನೆಲಸಮಗೊಂಡು, ಬಹುತೇಕ ಕಡೆಗಳಲ್ಲಿ ಶಿಥಿಲಗೊಂಡಿದ್ದವು. ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳೇ ಕೊಚ್ಚಿ ಹೋದ ಮೇಲೆ ಅಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆ ಹೇಗೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

ಮಕ್ಕಳ ಶಾಲಾ ಸಾಮಗ್ರಿಗಳು ನೆರೆಯಲ್ಲಿ ಹಾಳಾಗಿದ್ದರೆ, ಕಲಿಕೆ ಮುಂದುವರಿಸಲು ಶಾಲಾ ಕಟ್ಟಡಗಳೇ ಇಲ್ಲವಲ್ಲ. ಮುಂದೆ ಹೇಗೆ ಎನ್ನುವ ಚಿಂತೆಯ ಮಧ್ಯೆ ಅಲ್ಲಲ್ಲಿ ಶಾಲಾ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ತಾತ್ಕಾಲಿಕ ಶೆಡ್‍ಗಳ ನಿರ್ಮಾಣ ಮಾಡಿದ್ದ ಜಿಲ್ಲಾಡಳಿತ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಸಾಮಾನ್ಯವಾಗಿದ್ದವು.

ಇಂತಹ ಆರೋಪಗಳ ನಡುವೆ ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಗ್ರಾಮಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿರುವುದು ನೆರೆ ಗ್ರಾಮಸ್ಥರ ಶ್ಲಾಘನೆಗೆ ಒಳಗಾಗಿದೆ. ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ 113 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 316 ಕೋಣೆಗಳ ದುರಸ್ತಿ ಕಾರ್ಯ ನಡೆದಿದೆ. ಇದಕ್ಕಾಗಿ 2.69 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ ಆಯಾ ಎಸ್‍ಡಿಎಂಸಿ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ.

ಸಂಪೂರ್ಣ ಹಾಳಾಗಿ ಬಿದ್ದು ಹೋದ ಶಾಲಾ ಕೊಠಡಿಗಳ ಬದಲಾಗಿ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ 94 ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಂತಹ 100 ಕೋಣೆಗಳ ಪುನರ್ ನಿರ್ಮಾಣಕ್ಕಾಗಿ 11.21 ಕೋಟಿ ರೂ.ಗಳ ಪ್ರಸ್ತಾವನೆ ಸಹ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿಯನ್ನು ಡಿಡಿಪಿಐ ಶ್ರೀಶೈಲ ಬಿರಾದಾರ ನೀಡಿದ್ದಾರೆ. ಜಿಲ್ಲೆಯ ಒಂಟಗೋಡಿ, ಬುದ್ನಿ ಬಿ.ಕೆಯಲ್ಲಿ ಪಿಇಎಸ್ ಸಂಸ್ಥೆಯು ಮಾದರಿ ಶಾಲೆಗಳ ನಿರ್ಮಾಣ ಕಾರ್ಯ ನಡೆದಿದೆ.

ಮಣ್ಣೇರಿ, ಬೀರನೂರ, ತಳಕವಾಡಿ, ಢವಳೇಶ್ವರ ಗ್ರಾಮಗಳಲ್ಲಿ ವಿಪ್ರೋ ಸಂಸ್ಥೆಯವರ ಸಹಾಯಧನದಲ್ಲಿ ಹೊಸ ಶಾಲೆಗಳು ನಿರ್ಮಾಣಗೊಳ್ಳುತ್ತಿವೆ. ಶಾಲೆಗಳ ನಿರ್ಮಾಣ ಮತ್ತು ದುರಸ್ತಿ ಜತೆಗೆ ನೆರೆ ಹಾವಳಿಗೆ ತುತ್ತಾದ ಎಲ್ಲ ಗ್ರಾಮಗಳ ಶಾಲಾ ಮಕ್ಕಳಿಗೆ 2.39 ಲಕ್ಷ ಪುಸ್ತಕಗಳು ಸರಬರಾಜಾಗಿವೆ. ಬಾದಾಮಿ ತಾಲೂಕಿಗೆ 34 ಸಾವಿರ, ಹುನಗುಂದ ತಾಲೂಕಿಗೆ 75 ಸಾವಿರ, ಜಮಖಂಡಿ ತಾಲೂಕಿಗೆ 82 ಸಾವಿರ ಹಾಗೂ ಮುಧೋಳಕ್ಕೆ 48 ಸಾವಿರ ಹೊಸ ಪಠ್ಯ ಪುಸ್ತಕಗಳನ್ನು ಇಲಾಖೆ ಪೂರೈಕೆ ಮಾಡಿದೆ.

ನೆರೆಯಲ್ಲಿ ಮಕ್ಕಳ ಶೂ, ಸಾಕ್ಸ್ ಕೂಡ ಹಾಳಾಗಿದ್ದು, 1,445 ಶಾಲೆಗಳಿಗೆ ಶೂ ಹಾಗೂ ಸಾಕ್ಸ್ ಗಳನ್ನು ಸಹ ಖರೀದಿಸಿ ವಿತರಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಮಕ್ಕಳ ಕಲಿಕೆಗೆ ಅಗತ್ಯವಾದ ಬೋಧನಾ ಹಾಗೂ ಕಲಿಕಾ ಸಾಮಗ್ರಿಗಳಾದ ವಿವಿಧ ಮ್ಯಾಪ್ ಚಾರ್ಟ್ ಗಳು, ವಿಜ್ಞಾನದ ಉಪಕರಣಗಳು, ಗ್ಲೋಬ್ ಮುಂತಾದವುಗಳ ಖರೀದಿಗೆ ಈಗಾಗಲೇ 50 ಲಕ್ಷ ರೂ.ಗಳ ಅನುದಾನ ಸರ್ಕಾರದಿಂದ ಬಂದಿದೆ. ಶೀಘ್ರವೇ ನೆರೆ ಹಾವಳಿಯ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಒಟ್ಟಾರೆ ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನಿಗಾ ವಹಿಸಿ, ಕಲಿಕೆ ಪ್ರಕ್ರಿಯೆ ಎಂದಿನ ಹಾಗೆ ನಡೆಯುವಂತೆ ಸಹಜ ಸ್ಥಿತಿಗೆ ತರಬೇಕಿದೆ.

Click to comment

Leave a Reply

Your email address will not be published. Required fields are marked *