ಬಾಗಲಕೋಟೆ: ಮಂಗಳೂರು ಏರ್ ಪೋರ್ಟಿನಲ್ಲಿ ಆದಿತ್ಯ ರಾವ್ ಇಟ್ಟಿದ್ದ ಬಾಂಬ್ ಗಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ್ ಲೇವಡಿ ಮಾಡಿದರು.
ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ನಂಜಯ್ಯನಮಠ್, ಸಮಾಜವನ್ನು ಕುಲುಷಿತಗೊಳಿಸುವ ಉಡಾಫೆ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ಅಧಿಕೃತ ಮಾಹಿತಿ ಇದ್ದರೆ ಗೃಹ ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿತ್ತು. ಮದ್ದುಗುಂಡು ನೋಡಿದ್ರೆ ಕಂಪ್ಲೆಂಟ್ ಕೊಡಿ. ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳು ಇವೆ ಅಂತ ಸವಾಲು ಹಾಕಿದರು.
Advertisement
Advertisement
ಹೇಳಿಕೆಗಳು ಸಮಾಜವನ್ನು ಬದುಕಲು ಬಿಡಬೇಕೇ ವಿನಃ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಬಿಜೆಪಿ, ಕಾಂಗ್ರೆಸ್, ಜನತಾದಳ ಎಲ್ಲ ಪಕ್ಷಗಳಿಗೆ ಇದು ಅನ್ವಯವಾಗುತ್ತೆ. ಯಾವ ಮಸೀದಿಯಲ್ಲಿ ಮದ್ದುಗುಂಡು ಇದೆ ಎಂದು ರೇಣುಕಾಚಾರ್ಯ ತೋರಿಸಬೇಕು. ಇಲ್ಲವೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬಾಗಲಕೋಟೆ ಕಾಂಗ್ರೆಸ್ ಘಟಕದಿಂದ ಕಾನೂನು ಹೋರಾಟ ಮಾಡುತ್ತೇವೆ. ಅವರೊಬ್ಬ ಸಾರ್ವಜನಿಕರ ಎದುರು ವಿದೂಷಕನಂತೆ ಇದ್ದಾರೆ ಎಂದು ಗೇಲಿ ಮಾಡಿದ್ರು.
Advertisement
ಇದೇ ವೇಳೆ ಮಹಾಸರ್ಕಾರ ಬೆಳಗಾವಿ ಸೇರಿ ರಾಜ್ಯದ ಗಡಿ ತಂಟೆಗೆ ಬಂದ್ರೆ ಬೆಂಬಲ ವಾಪಸ್ ಪಡೆಯಿರಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒತ್ತಾಯ ಮಾಡಿದ್ರು. ಮುಗಿದು ಹೋದ ಗಡಿ ಅಧ್ಯಾಯ ಕೆದಕುವುದು ಸರಿಯಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿಯಿಲ್ಲ. ಠಾಕ್ರೆ, ಸಂಜಯ್ ರಾವತ್ ಬೆಂಕಿ ಹಾಕುವ ಕೆಲಸ ಮಾಡ್ತಿದ್ದಾರೆ. ಮೊದಲೇ ಬೆಳಗಾವಿಯಲ್ಲಿ ಕನ್ನಡಿಗರ ಪರಿಸ್ಥಿತಿ ಗಂಭೀರ ಇದೆ. ಮಹಾಜನ ವರದಿ ಬಗ್ಗೆ ಉತ್ತಮ ಅಭಿಪ್ರಾಯ ಎರಡು ನಾಡಿನವರು ಕೊಟ್ಟಿದ್ದಾರೆ. ಇನ್ನೊಮ್ಮೆ ಈ ರೀತಿ ಕೆದಕಿದರೆ, ಉಡಾಫೆ ತಕರಾರು ಮಾಡಿದ್ರೆ, ಮಹಾರಾಷ್ಟ್ರ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಲು ಆಗ್ರಹಿಸುವುದಾಗಿ ಎಚ್ಚರಿಕೆ ನೀಡಿದರು.
Advertisement
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋನಿಯಾಗಾಂಧಿ ತೆಗೆದುಕೊಳ್ಳುವ ನಿರ್ಣಯಕ್ಕೆ ನಮ್ಮ ಒಲವು ಇದೆ. ಯಾರಾದ್ರೂ ಬೇಗ ಆಗಿಬರಲಿ. ಬಹಳ ದಿನ ಜಾಗ ಖಾಲಿ ಇಡಬಾರದು. ಈಗಾಗಲೇ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಒಂದು ಅಧ್ಯಕ್ಷರನ್ನೂ ಮಾಡಲು ಆಗಿಲ್ಲ ನಿಮಗೆ, ಹೋಗಿ ಎಂದು ಜನ ಮಾತಾಡುವಂತೆ ಆಗಬಾರದು. ಅದೆಷ್ಟು ಬೇಗವೋ ಅಷ್ಟು ಬೇಗ ಆಯ್ಕೆ ಆಗಲಿ. ಇಲ್ಲಾಂದ್ರೆ ಏನೋ ಒಂದು ಗ್ರಹಣ ಹಿಡಿದಂತೆ ಆಗುತ್ತದೆ ಎಂದರು.