– ಬಿಸಾಕಿದ್ದ ತರಕಾರಿ ಒಯ್ಯಲು ಬಂದಿದ್ದ ವೃದ್ಧೆಯರು
ಬಾಲಗಕೋಟೆ: ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂಬ ಶಂಕೆ ಹಿನ್ನೆಲೆ ಮೂವರು ಅಪರಿಚಿತ ವೃದ್ಧೆಯರನ್ನು ಸ್ಥಳೀಯರು ಹಿಡಿದು ಥಳಿಸಿದ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.
ತೇರದಾಳ ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ. ಈ ಸಂತೆಗೆ ಇಂದು ಕೈ ಚೀಲ ಹಿಡಿದು ಮೂವರು ವೃದ್ಧೆಯರು ಬಂದಿದ್ದರು. ಆದರೆ ಅವರು ಸಂತೆಯಲ್ಲಿ ಅತ್ತಿತ್ತ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು, ಚೀಲಗಳನ್ನು ಕಿತ್ತುಕೊಂಡು ನೋಡಿದಾಗ ಅದರಲ್ಲಿ ಏನೂ ಇರಲಿಲ್ಲ. ಆದರೂ ಕೆಲ ಯುವಕರು, ಮಹಿಳೆಯರು ವೃದ್ಧೆಯರನ್ನು ಎಳೆದಾಡಿ ಥಳಿಸಿದ್ದಾರೆ.
Advertisement
Advertisement
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತೇರದಾಳ ಪೊಲೀಸರು ವೃದ್ಧೆಯರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ, ನಾವು ಬಡವರು. ತರಕಾರಿ ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಸಂತೆಯಲ್ಲಿ ವ್ಯಾಪಾರಿಗಳು ಬಿಸಾಕಿದ ತರಕಾರಿ ತೆಗೆದುಕೊಂಡು ಹೋಗಲು ಬಂದಿದ್ದೆವು. ಆದರೆ ಸಂತೆಯಲ್ಲಿ ಕೆಲವರು ನಮ್ಮ ಮೇಲೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ವೃದ್ಧೆಯರು ಅಳಲು ತೋಡಿಕೊಂಡಿದ್ದಾರೆ.
Advertisement
ಯಾರೋ ದುಷ್ಕರ್ಮಿಗಳು ಪೌಡರ್ ಎರಚಿ ಪ್ರಜ್ಞೆ ತಪ್ಪಿಸಿ ಹಣ ದೋಚುತ್ತಾರೆ ಎಂಬ ವದಂತಿ ತೇರದಾಳ ಪಟ್ಟಣದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ವೃದ್ಧೆಯರ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.