ಬಾಗಲಕೋಟೆ: ನೆರೆ ಸಂತ್ರಸ್ತರ ಸಮಸ್ಯೆಗೆ ಇಷ್ಟು ದಿನ ಕೂಲ್ ಆಗಿ ಸ್ಪಂದಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಂದು ಏಕಾಏಕಿ ಸಿಡಿಮಿಡಿಕೊಂಡ ಪ್ರಸಂಗ ಮುಧೋಳದಲ್ಲಿ ನಡೆದಿದೆ.
ಸಿಎಂ ಯಡಿಯೂರಪ್ಪ ಅವರು ಮುಧೋಳ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಮುಧೋಳ ಹಾಗೂ ಸುತ್ತಮುತ್ತಲಿನ ನೆರೆ ಸಂತ್ರಸ್ತರು, ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಮುಧೋಳದ ಪ್ರವಾಸಿ ಮಂದಿರಕ್ಕೆ ತೆರಳಿದ ಸಿಎಂ, ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.
Advertisement
Advertisement
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಎಂ ಮಾತನಾಡುವಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರು ಘೋಷಣೆ ಕೂಗಲು ಆರಂಭಿಸಿದರು. ಈ ಮಧ್ಯೆ ರೈತರೊಬ್ಬರು ಪದೇ ಪದೇ ತಮ್ಮ ಸಮಸ್ಯೆ ಹೇಳಲು ಮುಂದಾದರು. ಈ ಎಲ್ಲ ಬೆಳವಣಿಗೆಯು ಸಿಎಂ ಯಡಿಯೂರಪ್ಪ ಅವರಿಗೆ ಕಿರಿಕಿರಿ ಉಂಟಾಯಿತು.
Advertisement
ಏಕಾಏಕಿ ರೈತರೊಬ್ಬರ ವಿರುದ್ಧ ಸಿಡಿಮಿಡಿಗೊಂಡ ಸಿಎಂ, ‘ನಾನು ಮಾತನಾಡೋವರೆಗೂ ಸುಮ್ಮನೆ ಇರು. ಇಲ್ಲಾ ತಗೋ ಮೈಕ್ ನೀನೇ ಮಾತನಾಡು’ ಎಂದು ಗುಡುಗಿದರು. ಅಷ್ಟಾದರೂ ಪ್ರತಿಭಟನಾಕಾರರ ಗದ್ದಲ ಮುಂದುವರಿಯಿತು. ಆಗ ಸಿಎಂ ತಾಳ್ಮೆಯಿಂದ ಮಾತನಾಡಿ, ರಾಜ್ಯದ ಅಭಿವೃದ್ಧಿ ಕಾರ್ಯಗಳು ನಿಂತರೂ ಪರವಾಗಿಲ್ಲ. ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಿ ಹೆಚ್ಚಿನ ಅನುದಾನವನ್ನು ತಂದು ನೆರೆ ಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
Advertisement
ಪ್ರವಾಹದಿಂದ ರೈತರಿಗೆ ಬಾರಿ ನಷ್ಟವಾಗಿದೆ. ಮನೆ ಹಾಗೂ ಸಾಕಷ್ಟು ಬೆಳೆ ನಾಶವಾಗಿವೆ. ನಾವು ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚುವರಿ ಪರಿಹಾರ ಕೊಡುವುದಕ್ಕಾಗಿ ಕೇಂದ್ರ ಸರ್ಕಾರದ ಜೊತೆ ಮಾತಾಡುತ್ತೇನೆ. ವಾಸ ಮಾಡಲು ಯೋಗ್ಯವಿರದ ಮನೆಗಳ ನಿರ್ಮಾಣಕ್ಕೆ ಐದು ಲಕ್ಷ ರೂ. ಪರಿಹಾರ ನೀಡುತ್ತೇವೆ. ಈಗಾಗಲೇ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ರೂ. ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.