ಬಾಗಲಕೋಟೆ: ನೆರೆ ಪರಿಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ರಾಜ್ಯಕ್ಕೆ ಆಗಮಿಸಲಿದ್ದಾರೆಂದು ನೂತನ ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಕಾರಜೋಳ, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯದ ನಾಯಕರ ನಿಯೋಗದೊಂದಿಗೆ ತೆರಳಿ ಪ್ರಧಾನಿಗಳನ್ನು ಭೇಟಿ ಮಾಡಿದ್ದೇವೆ. ನೆರೆ ಪರಿಸ್ಥಿತಿಯ ಬಗ್ಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ಅಲ್ಲದೇ ಕೇಂದ್ರದ ಹಣಕಾಸು ಸಚಿವೆ ಹಾಗೂ ಗೃಹ ಸಚಿವರು ಈಗಾಗಲೇ ನೋಡಿಕೊಂಡು ಹೋಗಿದ್ದಾರೆ ಎಂದರು.
ಸೆಪ್ಟೆಂಬರ್ 7 ರಂದು ಪ್ರಧಾನಿ ಸಹ ಇಲ್ಲಿಗೆ ಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದಮೇಲೆ ಅನುದಾನಕ್ಕಾಗಿ ಮತ್ತಷ್ಟು ಮನವಿ ಮಾಡುತ್ತೇವೆ. ನೆರೆಯಿಂದ ರಾಜ್ಯದಲ್ಲಿ ಸುಮಾರು 32 ಸಾವಿರ ಕೋಟಿಯಷ್ಟು ಹಾನಿಯಾಗಿದೆ. 2 ಲಕ್ಷ 37 ಸಾವಿರ ಮನೆಗಳನ್ನು ಕಳೆದುಕೊಂಡು ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಮುಂದಿನ 10 ವರ್ಷ ರೋಡ್ ಮೇಲೆ ಪ್ರತಿಭಟನೆ ಮಾಡೋದೇ ಕೆಲಸ. ಅವರಿಗೆ ಬೇರೆ ಏನು ಕೆಲಸವಿಲ್ಲ. ಇನ್ನು ಕೆಎಂಎಫ್ ಅಧ್ಯಕ್ಷಗಾದಿ ರೇವಣ್ಣಗೆ ಕೈತಪ್ಪಿದ್ದಕ್ಕೆ ಟಾಂಗ್ ಕೊಟ್ಟ ಕಾರಜೋಳ, ಈ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಜ ಮಹಾರಾಜರಿದ್ದರು. ಈಗ ಅವರೆಲ್ಲ ಎಲ್ಲವನ್ನು ಬಿಟ್ಟು ಹೋಗಿದ್ದಾರೆ ಎನ್ನುವ ಮೂಲಕ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದರು.