ಬಾಗಲಕೋಟೆ: ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಬಾಲಕಿ ರಸ್ತೆ ಸಮಸ್ಯೆಯನ್ನು ಸರಿಪಡಿಸಿ ಎಂದು ಡಿಸಿಎಂ ಕಾರಜೋಳ ಹಾಗೂ ಜನಪ್ರತಿನಿಧಿಗಳಿಗೆ ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಇಂದು ಡಿಸಿಎಂ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿ ಪತ್ರದಲ್ಲಿ ತಿಳಿಸಿರುವ ವಿಚಾರ ರಸ್ತೆ ಸಮಸ್ಯೆಯದಲ್ಲ, ಅದು ರೈತರಿಬ್ಬರ ನಡುವಿನ ಜಗಳದ ಸಮಸ್ಯೆಯಾಗಿದೆ. ಹಳ್ಳಿಗಳಲ್ಲಿ ಹೊಲಕ್ಕೆ ತೆರಳುವ ವಹಿವಾಟದ ದಾರಿಯಾಗಿದೆ. ಆ ವಹಿವಾಟದ ದಾರಿಯಲ್ಲಿ ಎದುರು-ಬದುರು ಇರುವ ಜಮೀನು ಮಾಲೀಕರ ಜಾಗದ ಸಮಸ್ಯೆ. ಈ ಜಗಳ ಕನಿಷ್ಠ 10 ವರ್ಷಗಳಿಂದ ನಡೆಯುತ್ತಿದ್ದು, ಈಗಲೂ ಜಮೀನು ಮಾಲೀಕರು ಸಮ್ಮತಿ ಸೂಚಿಸಿದರೆ ನಾಳೆಯೇ ರಸ್ತೆ ಮಾಡಿಸುವೆ ಎಂದರು.
Advertisement
Advertisement
ಸಣ್ಣ ಮಗುವನ್ನು ಕರೆ ತಂದು ಪತ್ರ ಬರೆದುಕೊಟ್ಟು ಓದಿಸಿದ್ದಾರೆ. ಆದರೆ ಈ ಮಾಹಿತಿ ಸಿಕ್ಕ ಕೂಡಲೇ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ತಾಲೂಕು, ಜಿಲ್ಲಾಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರಿಂದ ಮಾಹಿತಿ ಪಡೆದಿದ್ದಾರೆ. ಸುಮ್ಮನೆ ಈ ವಿಚಾರದಲ್ಲಿ ಯಾರೋ ರಾಜಕೀಯ ಮಾಡಿದ್ದಾರೆ ಅಷ್ಟೇ. ನಾಳೆ ನಾನು ಮಾಧ್ಯಮಗಳನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ಅಲ್ಲಿಯ ಪರಿಸ್ಥಿತಿ ತೋರಿಸುತ್ತೇನೆ. ಮಾಧ್ಯಮಗಳು ಸ್ವತಂತ್ರ್ಯವಾಗಿದ್ದು, ಆದರೆ ಸುದ್ದಿಯ ಸತ್ಯಾ ಸತ್ಯತೆ ತಿಳಿದು ವರದಿ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.