– ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 48 ಕ್ಕೇರಿಕೆ
ಬಾಗಲಕೋಟೆ: ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ಇಂದು ಒಂದೇ ದಿನ 13 ಪ್ರಕರಣ ಪತ್ತೆಯಾಗಿದೆ. ಅದರಲ್ಲೂ ಡಾಣಕಶಿರೂರು ಗ್ರಾಮವೊಂದರಲ್ಲೇ 12 ಸೋಂಕಿತ ಪ್ರಕರಣ ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 48ಕ್ಕೆ ಏರಿದೆ.
Advertisement
ಇತ್ತ ಬಾದಾಮಿ ಪಟ್ಟಣಕ್ಕೂ ಕೊರೊನಾ ಕಾಲಿಟ್ಟಿದ್ದು, ಉಡುಪಿಯಿಂದ ಬಾದಾಮಿಗೆ ಬಂದಿದ್ದ 26 ವರ್ಷದ ಯುವತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 23 ವರ್ಷದ ಗರ್ಭಿಣಿ ರೋಗಿ 607 ಸಂಪರ್ಕದಲ್ಲಿದ್ದ ಡಾಣಕಶಿರೂರು ಗ್ರಾಮದ 12 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದ ಊಟಕ್ಕೆ ಗ್ರಾಮದ ಅನೇಕ ಕುಟುಂಬಗಳು ಬಂದಿದ್ದವು. ಹೀಗಾಗಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಗರ್ಭಿಣಿಗೆ ಸೋಂಕು ತಗುಲಿದ್ದು ಹೇಗೆ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಇದನ್ನೂ ಓದಿ: ಕೊರೊನಾ ಸೋಂಕಿತೆ ಗರ್ಭಿಣಿ ಪತಿಯಿಂದ ಗ್ರಾಮದ ಮನೆ ಮನೆಗೆ ತೆರಳಿ ಕಜ್ಜಾಯ ಭಿಕ್ಷೆ
Advertisement
Advertisement
ಮೇ 3ರಂದು ಗರ್ಭಿಣಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿದ್ದಾಗ ಸೋಂಕು ಪತ್ತೆಯಾಗಿತ್ತು. ಏಪ್ರಿಲ್ 27ರಂದು ಡಾಣಕಶಿರೂರು ಗ್ರಾಮದಿಂದ ತನ್ನ ತವರು ಮನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮಕ್ಕೆ ಗರ್ಭಿಣಿ ಹೋಗಿದ್ದರು. ಏಪ್ರಿಲ್ 28ರಂದು ಆರೋಗ್ಯ ಅಸ್ತವ್ಯಸ್ಥಗೊಂಡ ಹಿನ್ನೆಲೆ ರೋಣದಲ್ಲಿ ಎರಡು ಖಾಸಗಿ ಆಸ್ಪತ್ರೆಗೆ, ಬಳಿಕ ಧಾರವಾಡದ ಖಾಸಗಿ ಆಸ್ಪತ್ರೆಗೆ ಹಾಗೂ ಕೊನೆಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
Advertisement
ಗರ್ಭಿಣಿಗೆ ಸೋಂಕು ದೃಢಪಟ್ಟ ಬಳಿಕ ಡಾಣಕಶಿರೂರು ಗ್ರಾಮದ 128 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಷ್ಟೂ ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇದೀಗ 12 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಲಾಗಿದೆ.