ಗ್ರೀನ್ ಚಿಲ್ಲಿ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ತೆರೆಗಾಣುತ್ತಿದೆ. ಪವನ್ ಮತ್ತು ಪ್ರಸಾದ್ ನಿರ್ದೇಶನ ಈ ಚಿತ್ರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಅದೆಷ್ಟೋ ವರ್ಷಗಳಿಂದ ಸಿನಿಮಾ ಕನಸಿಟ್ಟುಕೊಂಡು, ಪ್ರೇಕ್ಷಕರ ಮನಸ್ಥಿಯನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ನಿರ್ದೇಶಕರುಗಳು ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರ ಮಜವೇನೆಂಬುದು ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.
Advertisement
ಈ ಚಿತ್ರದಲ್ಲಿ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಇಲ್ಲಿ ಬಡ್ಡಿ ಸೀನಪ್ಪನಾಗಿ ಅಬ್ಬರದ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಮೂಲ ಉದ್ದೇಶ ಮನೋರಂಜನೆ. ಒಂದೊಳ್ಳೆ ಕಥೆಯೊಂದಿಗೇ ಚಿತ್ರತಂಡ ಅದನ್ನು ಸಾಧ್ಯವಾಗಿಸಲು ಮುಂದಾಗಿದೆ. ಈಗಾಗಲೇ ನಾನಾ ಥರದಲ್ಲಿ ನಿರೀಕ್ಷೆ ಮೂಡಿಸಿರುವ ಬಡ್ಡಿಮಗನ್ ಲೈಫ್ ಈಗಾಗಲೇ ಪ್ರೇಕ್ಷಕರನ್ನು ತನ್ನ ಕ್ರಿಯೇಟಿವ್ ಹಾದಿಯ ಮೂಲಕವೇ ತಲುಪಿಕೊಂಡು ಮೋಡಿ ಮಾಡಿರುವ ರೀತಿ ಸಾಮಾನ್ಯವಾದುದೇನಲ್ಲ. ಒಂದು ಹಾಡಿನ ಮೂಲಕವೇ ಟಾಕ್ ಕ್ರಿಯೇಟ್ ಮಾಡಿ, ಆ ನಂತರ ಬಿಡುಗಡೆಯಾದ ಟ್ರೇಲರ್ ಮೂಲಕ ಕುತೂಹಲ ನಿಗಿ ನಿಗಿಸುವಂತೆ ನೋಡಿಕೊಳ್ಳುವಲ್ಲಿ ಚಿತ್ರತಂಡ ಗೆದ್ದಿದೆ.
Advertisement
Advertisement
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೇರೆಯವರ ಬದುಕಿನೊಳಗೆ ಹಣಕಿ ಹಾಕುವುದು ಮತ್ತು ಪರರ ಬಗ್ಗೆ ಮಾತಾಡಿಕೊಳ್ಳೋದೆಂದರೆ ಅದೆಂಥಾದ್ದೋ ಖುಷಿ. ಹಳ್ಳಿಗಾಡಿನಲ್ಲಂತೂ ಅದಕ್ಕೆ ಬೇರೆಯದ್ದೇ ರೀತಿಯ ಮಜವಿರುತ್ತದೆ. ಇಲ್ಲಿರೋದೂ ಕೂಡಾ ಅಂಥಾದ್ದೇ ಕಥೆ. ಕಂಡ ಕಂಡವರಿಗೆ ಸಾಲ ಕೊಟ್ಟು ಅದನ್ನು ವಸೂಲಿ ಮಾಡೋದಕ್ಕೆ ನಿರ್ದಾಕ್ಷಿಣ್ಯವಾದ ವೆರೈಟಿ ವೆರೈಟಿ ದಂಡ ಪ್ರಯೋಗಿಸುವ ಬಡ್ಡಿ ಸೀನಪ್ಪನೆಂಬ ಕ್ಯಾರೆಕ್ಷರಿನ ಸುತ್ತಾ ಕಥೆ ಸುತ್ತುತ್ತದೆ. ಇಲ್ಲಿ ಅಷ್ಟೇ ಮಜವಾದ ಮತ್ತೊಂದಷ್ಟು ಪಾತ್ರಗಳೂ ಸರಿಯುತ್ತಿರುತ್ತವೆ. ಕಥೆ ಯಾವ ಸ್ವರೂಪ ಪಡೆದುಕೊಂಡರೂ ಮನರಂಜನೆ ಕೊಂಚವೂ ಮುಕ್ಕಾಗದಂತೆ ಈ ಚಿತ್ರವನ್ನು ಕಟ್ಟಿ ಕೊಡಲಾಗಿದೆಯಂತೆ.