ಕೆಲ ಸಿನಿಮಾಗಳು ಹಾಡು ಮತ್ತು ಟ್ರೇಲರ್ ಮುಂತಾದವುಗಳೊಂದಿಗೆ ಸೃಷ್ಟಿಸೋ ಕ್ರೇಜ್ ಮಜವಾಗಿರುತ್ತದೆ. ಯಾವ ಸದ್ದುಗದ್ದಲವೂ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಹೀಗೆ ಕ್ರಿಯೇಟಿವಿಟಿಯಿಂದಲೇ ಸುದ್ದಿ ಮಾಡುವ ಚಿತ್ರಗಳು ಗಟ್ಟಿಯಾದ ಹೂರಣವನ್ನೂ ಹೊಂದಿರುತ್ತವೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆ ನಂಬಿಕೆಯನ್ನು ಮತ್ತೊಂದಷ್ಟು ಗಟ್ಟಿಗೊಳಿಸುವಂತೆಯೇ ಬಡ್ಡಿಮಗನ್ ಲೈಫು ಚಿತ್ರ ತೆರೆಗಂಡಿದೆ. ಹಳ್ಳಿ ಹಿನ್ನೆಲೆಯ ಮಜವಾದ ಕಥಾನಕದೊಂದಿಗೆ ಒಂದೊಳ್ಳೆ ಪ್ರೇಮ ಕಥನವನ್ನು ಹೇಳುವ ಬಡ್ಡಿಮಗನ್ ಲೈಫು ಎಲ್ಲರಿಗೂ ಆಪ್ತವಾಗುವಂತೆ ಮೂಡಿ ಬಂದಿದೆ.
Advertisement
ಇದು ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಚಿತ್ರ. ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರೋ ಈ ಸಿನಿಮಾದಲ್ಲಿ ಸರಳವಾಗಿ ಕಾಣುವ ಕಥೆಯನ್ನೇ ವಿರಳವೆನ್ನಿಸುವಂತೆ ಕಟ್ಟಿ ಕೊಟ್ಟಿರುವ ರೀತಿಯಲ್ಲಿಯೇ ಇಲ್ಲಿ ನಿರ್ದೇಶನ ಗೆದ್ದಿದೆ. ಯಾವುದೇ ಗೋಜಲುಗಳಿಲ್ಲದೇ ದೃಶ್ಯ ಕಟ್ಟುತ್ತಾ, ಪ್ರತಿ ಹಂತದಲ್ಲಿಯೂ ಒಂದಷ್ಟು ಟ್ವಿಸ್ಟುಗಳೊಂದಿಗೆ ಭರ್ಜರಿ ಮನೋರಂಜನೆ ಮುಕ್ಕಾಗದಂತೆ ಈ ಸಿನಿಮಾವನ್ನು ರೂಪಿಸುವಲ್ಲಿ ನಿರ್ದೇಶಕರುಗಳು ಗೆದ್ದಿದ್ದಾರೆ. ಇದರೊಂದಿಗೆ ಅಗಾಧ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದ ನಿರೀಕ್ಷೆಗಳೆಲ್ಲವೂ ನಿಜವಾದಂತಾಗಿದೆ.
Advertisement
Advertisement
ಆ ಊರಿಗೆಲ್ಲ ಸಾಲ ಕೊಡುತ್ತಲೇ ಭಾರೀ ಪ್ರಮಾಣದಲ್ಲಿ ಬಡ್ಡಿ ತಿನ್ನುವ ಕಸುಬಿನ ಬಡ್ಡಿ ಸೀನಪ್ಪ ಆ ಊರಿಗೇ ಧನಿಕ. ಯಾರೆಂದರೆ ಯಾರೂ ಆತನಿಗೆ ಎದುರು ನಿಂತು ಮಾತಾಡಲು ಹಿಂದೇಟು ಹಾಕುವಂಥಾ ವಾತಾವರಣವಿರುತ್ತದೆ. ಇಂಥವನಿಗೊಬ್ಬಳು ಬೊಂಬೆಯಂಥಾ ಮಗಳು. ತಂದೆಯ ಅಂಕೆಯನ್ನೂ ಮೀರಿ ಆಕೆ ಅದೇ ಊರಿನ ಮಧ್ಯಮ ವರ್ಗದ ಹುಡುಗನೊಂದಿಗೆ ಲವ್ವಲ್ಲಿ ಬಿದ್ದಿರುತ್ತಾಳೆ. ಹೇಳಿ ಕೇಳಿ ಅದು ಪುಟ್ಟ ಊರು. ಅದೆಷ್ಟು ದಿನ ಅಂತ ಇಂಥಾ ಪ್ರೇಮ ಪ್ರಕರಣಗಳು ಗುಟ್ಟಾಗಿರಲು ಸಾಧ್ಯ? ಅದರಂತೆಯೇ ಮಗಳ ಪ್ರೇಮ ಪುರಾಣ ಮನೆ ಮಂದಿಗೆ ಗೊತ್ತಾಗಿ ರಂಪ ರಾಮಾಯಣ ಸಂಭವಿಸಿ ಆಕೆಗೆ ಗೃಹ ಬಂಧನ ಫಿಕ್ಸಾಗುತ್ತದೆ. ಅದನ್ನು ಮೀರಿಕೊಂಡು ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗೋ ಆ ಜೋಡಿಯ ಕಥೆ ಏನಾಗುತ್ತದೆಂಬುದು ಅಸಲೀ ಕುತೂಹಲ.
Advertisement
ಈ ಪ್ರೇಮ ಪ್ರಕರಣದ ಜೊತೆ ಜೊತೆಗೆ ಒಂದಷ್ಟು ಅಂಶಗಳನ್ನು ಸೇರಿಸಿಕೊಂಡು ಈ ಕಥೆಯನ್ನು ಹೊಸೆಯಲಾಗಿದೆ. ಇಲ್ಲಿ ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ಅಕ್ಷರಶಃ ವಿಜೃಂಭಿಸಿದ್ದಾರೆ. ಇನ್ನುಳಿದಂತೆ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ಕೂಡಾ ಚೆಂದಗೆ ನಟಿಸಿದ್ದಾರೆ. ಅದರಲ್ಲಿಯೂ ಐಶ್ವರ್ಯಾ ರಾವ್ ಎಲ್ಲರನ್ನೂ ಸೆಳೆಯುವಂಥಾ ಅಚ್ಚುಕಟ್ಟಾದ ನಟನೆ ನೀಡಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವನ್ನೂ ಇಲ್ಲಿ ಶ್ರದ್ಧೆಯಿಂದ ರೂಪಿಸಲಾಗಿದೆ. ಒಟ್ಟಾರೆಯಾಗಿ ಈ ಎಲ್ಲ ಅಂಶಗಳೊಂದಿಗೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.
ರೇಟಿಂಗ್: 3.5/5