Connect with us

Karnataka

ಎಚ್‍ಡಿಕೆಗೆ ಯಡಿಯೂರಪ್ಪ ಶಾಕ್ – ಬಡವರ ಬಂಧು ಯೋಜನೆಗೆ ಎಳ್ಳುನೀರು?

Published

on

ಬೆಂಗಳೂರು: ರಾಜ್ಯ ಸರ್ಕಾರ ಖಜಾನೆ ಖಾಲಿ ನೆಪದಲ್ಲಿ ಕೆಲವು ಮಹತ್ವದ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಪೈಕಿ ಕಳೆದ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಜಾರಿಗೆ ತಂದಿದ್ದ ಬಡವರ ಬಂಧು ಕಾರ್ಯಕ್ರಮಕ್ಕೆ ಎಳ್ಳುನೀರು ಬಿಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಆರ್ಥಿಕ ಅಶಕ್ತರು, ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿಯಲ್ಲಿ ಸರ್ಕಾರವೇ ನಿತ್ಯ ಸುಮಾರು 10 ಸಾವಿರ ರೂ.ವರೆಗೂ ಕೈ ಸಾಲ ಕೊಡುವ ಮಹತ್ವದ ಯೋಜನೆ ಇದಾಗಿದೆ. ಖಾಸಗಿ ಲೇವದೇವಿದಾರರ ಶೋಷಣೆಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಕುಮಾರಸ್ವಾಮಿ ಈ ಮಹತ್ವದ ಯೋಜನೆಯನ್ನು 2018ರ ನವೆಂಬರ್ 22 ರಂದು ಜಾರಿಗೊಳಿಸಿದ್ದರು.

ಆರ್ಥಿಕ ಸಂಕಷ್ಟ, ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಪಾಲು ಬಾರದಿವುದರಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಮ್ಮಿಶ್ರ ಸರ್ಕಾರದ ಕೆಲವೊಂದು ಯೋಜನೆಗಳನ್ನು ಕೈಬಿಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಬಡವರ ಬಂಧು ಯೋಜನೆಯು ಸಹ ಒಂದಾಗಿದೆ ಎಂದು ಹೇಳಲಾಗಿದೆ.

ಬಡವರ ಬಂಧು ಯೋಜನೆ ಬಿಜೆಪಿ ಸರ್ಕಾರ ಬಂದಾಗಿನಿಂದ ಬಹುತೇಕ ನೆನಗುದಿಗೆ ಬಿದ್ದಿದೆ. ಇದೀಗ ಈ ಯೋಜನೆಗೆ ಸಂಪೂರ್ಣವಾಗಿ ಇತಿಶ್ರೀ ಹಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವು ತೀರ್ಮಾನಿಸಿದೆ ಎನ್ನಲಾಗಿದೆ. ಇದೇ ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್‍ನಲ್ಲಿ ಬಡವರ ಬಂಧು ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಸಲದ ಬಜೆಟ್ ನಲ್ಲಿ ಬಡವರ ಬಂಧು ಯೋಜನೆಗೆ ಸರ್ಕಾರವು ಹಣ ನಿಗದಿ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಬೀದಿ ಬದಿ ವ್ಯಾಪಾರಿಗಳು, ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು-ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಸೇರಿದಂತೆ ಚರ್ಮದ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಬಡವರ ಬಂಧು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಯೋಜನೆ ಜಾರಿಯಾದ 2018-19ನೇ ಸಾಲಿನಲ್ಲಿ 50 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಬಡವರ ಬಂಧು ಯೋಜನೆ ಜಾರಿಯಾದ ಬಳಿಕ ಇದುವರೆಗೆ ಸುಮಾರು 11 ಸಾವಿರ ವ್ಯಾಪಾರಿಗಳಷ್ಟೇ ಯೋಜನೆಯ ಲಾಭ ಪಡೆದಿದ್ದಾರೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಯೋಜನೆ ಪಡೆದುಕೊಂಡಿದ್ದ ವೇಗ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ಕುಂಠಿತವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಯೋಜನೆಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದೇ ಹಂತಹಂತವಾಗಿ ಯೋಜನೆ ಮಹತ್ವ ಕಳೆದುಕೊಳ್ಳುತ್ತಾ ಬಂದಿದೆ.

Click to comment

Leave a Reply

Your email address will not be published. Required fields are marked *