ಬಡವ ರಾಸ್ಕಲ್ ಬಳಗ ಮತ್ತೆ ಒಂದಾಗಿರುವುದು ಗೊತ್ತೇ ಇದೆ. ನಟರಾಕ್ಷಸ ಡಾಲಿ ಧನಂಜಯ್ (Dhananjay) ಜನ್ಮದಿನಕ್ಕೆ ಸಣ್ಣದೊಂದು ಝಲಕ್ ಬಿಟ್ಟು ಥ್ರಿಲ್ ಹೆಚ್ಚಿಸಿರುವ ಅಣ್ಣ From Mexico (Anna From Mexico) ಚಿತ್ರತಂಡವೀಗ ಸದ್ದಿಲ್ಲದೇ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಹೆಜ್ಜೆ ಇಡಲು ತಯಾರಾಗಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಧನು ಹಾಗೂ ಶಂಕರ್ ಗುರು ಜೋಡಿಯ ಅಣ್ಣ From Mexico ಸಿನಿಮಾದ ಮುಹೂರ್ತ ನೆರವೇರಿದೆ. ರಾಯಲ ಸ್ಟುಡಿಯೋಸ್ ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು (Shankar Guru) ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು. ಸ್ನೇಹಿತ ಹಾಗು ಹಿತೈಷಿಗಳಾದ ಮೃಣಾಲ್ ಹೆಬ್ಬಾಳ್ಕರ್ ರವರು ಸಿನಿಮಾದ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ.
’ಅಣ್ಣ From Mexico’ ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕ ಆಕ್ಷನ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದು. ಐರಾ ಫಿಲ್ಮ್ಸ್ ಕೂಡ ಜೊತೆಯಾಗಿ ಕೈ ಜೋಡಿಸಿದೆ.
ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದು. ಜನವರಿ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ, ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇನ್ನು, ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ-2, ಝೀಬ್ರಾ ಹಾಗೂ ಚಿತ್ರದಲ್ಲಿ ಧನು ನಟಿಸುತ್ತಿದ್ದಾರೆ. ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.