ಬಾಗಲಕೋಟೆ: ಕರ್ತವ್ಯಲೋಪ ಹಿನ್ನೆಲೆ ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ವೆಂಕಟೇಶ್ ನಾಯಕ್ ಅವರನ್ನು ಕರ್ನಾಟಕ ಸರ್ಕಾರ ಸೇವೆಯಿಂದಲೇ ಅಮಾನತು ಮಾಡಿದೆ.
ಮಂಗಳವಾರ ಬೆಂಗಳೂರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವೆಂಕಟೇಶ್ ನಾಯಕ್ ಅವರನ್ನ ಸರ್ಕಾರಿ ಸೇವೆಯಿಂದಲೇ ಅಮಾನತು ಆದೇಶ ಹೊರಡಿಸಿದೆ. ಇಲಾಖೆವಾರು ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement
ಅಮಾನತುಗೊಂಡಿದ್ದು ಯಾಕೆ?
ಜುಲೈ 18 ರಂದು ಬಾದಾಮಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರದ ಅಧಿಕಾರಿಗಳ ಕಾರ್ಯದ ಬಗ್ಗೆ ಸ್ಥಳೀಯ ಶಾಸಕರಾಗಿರುವ ಸಿದ್ದರಾಮಯ್ಯ ಮಾಹಿತಿ ಪಡೆದರು. ಈ ವೇಳೆ ಬಾದಾಮಿ ತಾಲೂಕು ನೀರು ಸರಬರಾಜು ಇಲಾಖೆ ಸಹಾಯಕ ಎಂಜಿನಿಯರ್ ಅವರು ಇಲಾಖೆ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸದಿರುವುದು ಕಂಡು ಬಂದಿತ್ತು. ಇದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಯನ್ನು ಅಮಾನತು ಮಾಡಲು ಜಿಲ್ಲಾ ಪಂಚಾಯತಿ ಸಿಇಓ ವಿಕಾಸ ಸುರಳ್ಕರ್ ಗೆ ಫೋನ್ ಮೂಲಕ ಸೂಚಿಸಿದ್ದರು.
Advertisement
Advertisement
ತಾಲೂಕಿನಲ್ಲಿ 165 ನೀರು ಶುದ್ಧೀಕರಣ ಘಟಕಗಳು ನಿರ್ಮಿಸಲಾಗಿದ್ದು, ಆದರೆ ಇವುಗಳಲ್ಲಿ 163 ಘಟಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಕುರಿತು ಸಮರ್ಪಕ ಉತ್ತರ ನೀಡಲು ಸಹಾಯಕ ಎಂಜಿನಿಯರ್ ವೆಂಕಟೇಶ್ ನಾಯಕ್ ವಿಫಲರಾಗಿದ್ದರು. ಈ ವೇಳೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ನೀವೇ ನನ್ನ ಸ್ಥಾನದಲ್ಲಿ ಇದಿದ್ದರೆ ಏನು ಮಾಡುತ್ತಿದ್ದೀರಿ? ನಿಮ್ಮ ಕೆಲಸ ನಿಮಗೇ ತೃಪ್ತಿ ತಂದಿದ್ದೀಯಾ ಎಂದು ಪ್ರಶ್ನಿಸಿದರು.
Advertisement
ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಲಾಗದೆ ತಮ್ಮ ಕರ್ತವ್ಯ ಲೋಪವನ್ನು ಒಪ್ಪಿಕೊಂಡ ಅಧಿಕಾರಿ ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅಧಿಕಾರಿಗಳ ಯಾವುದೇ ಮಾತಿಗೆ ಸಮಾಧಾನಗೊಳ್ಳದ ಸಿದ್ದರಾಮಯ್ಯ ಅವರು ಅಮಾನತು ಮಾಡುವಂತೆ ಸೂಚನೆ ನೀಡಿದ್ದರು. ಈ ವೇಳೆ ಅಧಿಕಾರಿ ತಮ್ಮನ್ನು ಅಮಾನತು ಮಾಡದಂತೆ ಭಾವುಕರಾಗಿ ಕಣ್ಣೀರು ಹಾಕಿ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರು ತಮ್ಮ ಸೂಚನೆಯನ್ನು ಹಿಂಪಡೆಯದೆ, ಯಾವುದೇ ಅಧಿಕಾರಿ ಸಹ ಮುಂದಿನ ದಿನಗಳಲ್ಲಿ ಕರ್ತವ್ಯ ಲೋಪ ಎಸಗಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.