ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಹೋಬಳಿ ತಾಳಗುಪ್ಪ ಗ್ರಾಮದಲ್ಲಿ ಬಾದಾಮಿ ಚಾಲುಕ್ಯರ ಕಾಲದ ಸ್ಮಾರಕ ಶಾಸನ ಪತ್ತೆಯಾಗಿದೆ.
ಗ್ರಾಮದಲ್ಲಿರುವ ಈಶ್ವರ-ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ದೇವಾಲಯದ ಬಾಗಿಲನ್ನು ಬಿಚ್ಚಿದಾಗ ತೋರಣದ ಕಲ್ಲಿನಲ್ಲಿ ಸ್ಮಾರಕ ಶಾಸನ ಪತ್ತೆಯಾಗಿದೆ. 12ನೇ ಶತಮಾನದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಾಗ ಈ ಶಾಸನ ನಡುವೆ ಗಂಧ (ರಂಧ್ರ) ಮಾಡಿ ತೋರಣ ಕಲ್ಲಾಗಿ ಬಳಸಲಾಗಿದೆ.
Advertisement
ಇದರಲ್ಲಿ ಐದು ಸಾಲಿನ ಪೂರ್ವ ಹಳೆಗನ್ನಡ ಶಾಸನವಿದ್ದು, ನಾಲ್ಕು ಅಕ್ಷರಗಳು ರಂಧ್ರ ಮಾಡಿರುವುದರಿಂದ ಹೋಗಿವೆ. ದ್ವೇಷದಿಂದಾದ ಹೋರಾಟವೊಂದರಲ್ಲಿ ಉತ್ಸಾಹ ಕುಂದಿದ ಶ್ರೀ ದೇವಷ್ಟೇವನು ಮರಣ ಹೊಂದಿ ಸಮಾಧಿಯಾದಾಗ ಅವನ ನೆನಪಿಗೋಸ್ಕರ ಗೊರಸ ಎಂಬವನು ಈ ಸ್ಮಾರಕ ಶಾಸನ ನಿಲ್ಲಿಸಿದನು ಎಂದು ತಿಳಿದು ಬರುತ್ತದೆ.
Advertisement
Advertisement
ಲಿಪಿಯ ಆಧಾರದ ಮೇಲೆ ಇದು ಕ್ರಿ.ಶ 6-7ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರ ಶಾಸನ ಎಂದು ಗೊತ್ತಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೆ ಬಾದಾಮಿ ಚಾಲುಕ್ಯರ ಆರು ಶಾಸನಗಳು ಮಾತ್ರ ಪತ್ತೆಯಾಗಿದ್ದವು. ಈಗ ಮತ್ತೊಂದು ಶಾಸನದೊಂದಿಗೆ ಅವುಗಳ ಸಂಖ್ಯೆ 7ಕ್ಕೆ ಏರಿದೆ.
Advertisement
ಇಲ್ಲಿರುವ ಈಶ್ವರ ದೇವಾಲಯದ ಲಿಂಗವು ಬಾದಾಮಿ ಚಾಲುಕ್ಯರ ಕಾಲದ್ದಾಗಿದೆ. ಶಿಥಿಲಗೊಂಡ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇವಾಲಯದ ಮುಂಭಾಗದಲ್ಲಿ ಕ್ರಿ.ಶ 12ನೇ ಶತಮಾನದ ತುರುಗೋಳು ವೀರಗಲ್ಲು ಶಾಸನ ಇದೆ.
ಇನ್ನು ಶಾಸನ ಪತ್ತೆಗೆ ತಹಶೀಲ್ದಾರ್ ಪುಟ್ಟರಾಜ ಗೌಡ ಮತ್ತು ಗ್ರಾಮಸ್ಥರು ಸಹಕರಿಸಿದರೆ, ಶಾಸನ ಓದಲು ಡಾ.ಜಗದೀಶ್, ಡಾ.ಅನಿಲ್ ಕುಮಾರ್ ಸಹಕರಿಸಿದರು ಎಂದು ಪ್ರಾಚ್ಯ ವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ತಿಳಿಸಿದ್ದಾರೆ.