– ಅಮವಾಸ್ಯೆಯಂದು ಶಕ್ತಿ ದೇವತೆಯ ಆರಾಧನೆ
– ಆರಾಧನೆಯಿಂದ ಶತ್ರು ಭಾದೆ ನಿವಾರಣೆ
ಬೆಂಗಳೂರು: ಬಹುತೇಕ ಜನರಿಗೆ ಅಮವಾಸ್ಯೆ ಇಂದು ಅಥವಾ ನಾಳೆಯೋ ಎಂಬ ಗೊಂದಲದಲ್ಲಿರುತ್ತಾರೆ. ಬಾದಾಮಿ ಅಮಾವಾಸ್ಯೆ ಎಂದರೆ ಕೇವಲ ಬಾದಾಮಿ ಬನಶಂಕರಿಯ ತಾಯಿಯ ಆರಾಧಕರು ಆಚರಣೆ ಮಾಡುತ್ತಾರೆ ಎಂಬ ಕಲ್ಪನೆಯನ್ನು ಹೊಂದಿರುತ್ತಾರೆ. ಬಾದಾಮಿ ಅಮಾವಾಸ್ಯೆಯಂದು ಶಕ್ತಿ ದೇವತೆಯನ್ನು ಆರಾಧನೆ ಮಾಡಲಾಗುತ್ತಿದೆ. ಪ್ರತಿಯೊಂದು ಕುಟುಂಬಕ್ಕೂ ಕುಲದೇವತೆ ಎಂಬುವುದು ಇರುತ್ತದೆ. ಈ ಅಮವಾಸ್ಯೆಯಂದು ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಆರಾಧಿಸಬೇಕು.
ಈ ಬಾದಾಮಿ ಅಮಾವಾಸ್ಯೆ ಇಂದು ಸಂಜೆ 4 ಗಂಟೆ 40 ನಿಮಿಷಕ್ಕೆ ಪ್ರಾರಂಭವಾಗಿ ಸೋಮವಾರ 3 ಗಂಟೆ 30ರಿಂದ 36 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಇಂದೇ ಸೋಮವಾರ ಅಮಾವಾಸ್ಯೆಯನ್ನು ಆಚರಿಸಬೇಕು. ಈ ಅಮಾವಾಸ್ಯೆಯ ಹಿಂದಿನ ಮತ್ತು ಮುಂದಿನ ದಿನವನ್ನು ಅನಧ್ಯಯನ ಎಂದು ಕರೆಯಲಾಗುತ್ತದೆ. ಈ ಅನಧ್ಯಯನದಂದು ಪ್ರಕೃತಿಯಲ್ಲಿ ಏರಿಳಿತಗಳು ಉಂಟಾಗುತ್ತವೆ ಎಂಬುವುದು ನಂಬಿಕೆ. ಶಕ್ತಿ ಸ್ವರೂಪಿನಿ ದೇವಿಯ ಶಕ್ತಿ ಈ ಅಮಾವಾಸ್ಯೆಯಂದು ಹೆಚ್ಚಾಗುತ್ತದೆ. ಇಂತಹ ಶಕ್ತಿ ದೇವತೆಯ ಆರಾಧನೆಯೇ ಬಾದಾಮಿ ಅಮವಾಸ್ಯೆಯ ವೈಶಿಷ್ಟ್ಯತೆ.
ಸೋಮವಾರ ಮಡಿ ಮೈಲಿಗೆಯಿಂದ ನಿಮ್ಮ ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಪೂಜೆ ಮಾಡಬೇಕು. ಯಾರು ಭಕ್ತಿ ಭಾವದಿಂದ ಕುಲದೇವತೆಯನ್ನು ಆರಾಧನೆ ಮಾಡುತ್ತಾರೋ ಅಂತಹವರಿಗೆ ಹಿತ ಶತ್ರು, ಅಹಿತ ಶತ್ರು ಮತ್ತು ನೀಚ ಶತ್ರು ಅಂತಹ ಶತ್ರು ಭಾದೆಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆಯಿದೆ.
ಉದ್ಯೋಗ, ವ್ಯಾಪಾರಗಳಲ್ಲಿ ಬಹಳಷ್ಟು ಜನರು ದೃಷ್ಟಿದೋಷದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರು ಈ ಅಮಾವಾಸ್ಯೆಯಂದು ಶಕ್ತಿ ಆರಾಧನೆಯಿಂದ ದೋಷ ನಿವಾರಣೆ ಮಾಡಿಕೊಳ್ಳಬಹುದು.
ಪೂಜೆ ಮಾಡೋದು ಹೇಗೆ?
ಒಂದು ಕೂಷ್ಮಾಂಡ (ಕುಂಬಳಕಾಯಿ) ತೆಗೆದುಕೊಳ್ಳಬೇಕು. ಕುಂಬಳಕಾಯಿಯ ಮೇಲೆ ಕರ್ಪೂರವನ್ನಿಟ್ಟು ಹಚ್ಚಿ ಮನೆಯ ಒಳಗಡೆ ಓಡಾಡಬೇಕು. ಕರ್ಪೂರ ಹಚ್ಚಿದ ಕುಂಬಳಕಾಯಿ ಹಿಡಿದು ಹೋಗುವಾಗ ”ಸಕಲ ದೋಷ ನಿವಾರಾಣರ್ತು ಮಮಃ, ಗೃಹೆ ಸಕಲ ದೋಷನಿವಾರಣಾರ್ತು” ಎಂದು ಭಕ್ತಿಯಿಂದ ಹೇಳುತ್ತಾ ವ್ಯವಸ್ಥಿತವಾಗಿ ಮನೆಯ ಎಲ್ಲ ಭಾಗಗಳಿಗೆ ಕೂಷ್ಮಾಂಡವನ್ನು ತೋರಿಸಬೇಕು. ಕೊನೆಗೆ ಮನೆಯ ಹೊರಗಡೆ ಬಂದು ಕುಂಬಳಕಾಯಿಯನ್ನು ಒಡೆಯಬೇಕು.
ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿರುವ ಕಷ್ಟ, ದರಿದ್ರತೆ ದೂರ ಹೋಗುತ್ತದೆ ಎನ್ನುವ ನಂಬಿಕೆಯಿದೆ. ‘ರಜೋಗುಣ’ ಎಂಬ ದೋಷವನ್ನು ನಿವಾರಣೆ ಮಾಡುವ ವಿಶಿಷ್ಟತೆಯನ್ನು ಈ ಅಮಾವಾಸ್ಯೆ ಹೊಂದಿದೆ. ಇಂತಹ ಅಮಾವಾಸ್ಯೆ ಬಂದಿದ್ದು, ಎಲ್ಲರನ್ನು ವ್ಯವಸ್ಥಿತವಾಗಿ ಪೂಜೆ ಮಾಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬಹುದು.