ಬೆಂಗಳೂರು: ನಗರದ ವಿವಿಪುರಂನಲ್ಲಿರುವ ಗವಿಗಂಗಾಧರ ದೇವಾಸ್ಥಾನ ಸೂರ್ಯರಶ್ಮಿ ವಿಸ್ಮಯದಿಂದಲೇ ಖ್ಯಾತಿ. ಶಿವನೇ ನಮ್ಮನ್ನು ಕಾಪಾಡು ಅಂತ ಬರುವ ಭಕ್ತರ ಇಷ್ಟಾರ್ಥ ನೆರವೇರಿಸುವ ಶಿವನಿಗೆ ಈಗ ಸಂಕಷ್ಟ ಶುರುವಾಗಿದೆ. ನೆಮ್ಮದಿ, ಭಕ್ತಿಯ ತಾಣವಾಗಿದ್ದ ಗಂಗಾಧರೇಶ್ವರನ ಸನ್ನಿಧಾನಕ್ಕೆ ಈಗ ಭಕ್ತರು ಕಾಲಿಡೋದಕ್ಕೂ ಹಿಂದೇಟು ಹಾಕ್ತಿದ್ದಾರೆ. ಕಾರಣ ದೇವಾಲಯದ ಆವರಣದಲ್ಲಿ ಬರುತ್ತಿರೋ ವಿಚಿತ್ರ ವಾಸನೆ.
ಪ್ರತಿನಿತ್ಯ ಗವಿಗಂಗಾಧರನಿಗೆ ಹಾಲು, ಹಣ್ಣಿನಿಂದ ಅಭಿಷೇಕ ಮಾಡಲಾಗುತ್ತದೆ. ಅಭಿಷೇಕದ ಬಳಿಕ ತ್ಯಾಜ್ಯವೆಲ್ಲ ಗವಿಯೊಳಗೆ ಹೋಗಿ ಶೇಖರಣೆಯಾಗುತ್ತಿದ್ದು, ದೇವಾಲಯದೊಳಗೆ ಗಬ್ಬು ವಾಸನೆ ಬರುತ್ತಿದೆ. ಗವಿಯೊಳಗೆ ಧ್ಯಾನ ಪೂಜೆಗೆ ಬರುವ ಭಕ್ತರು ಏಕಾಗ್ರತೆಯಿಂದ ಪೂಜೆ ಮಾಡೋದಕ್ಕೆ ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಲಕ್ಷಾಂತರ ಆದಾಯ ತಂದುಕೊಡುವ ದೇಗುಲವನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಹಿಂದೇಟು ಹಾಕುತ್ತಿರೋದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಗವಿಗಂಗಾಧರ ದೇವಸ್ಥಾನ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರ. ಅದಕ್ಕಿಂತಲೂ ಮುಖ್ಯವಾಗಿ ಗವಿಗಂಗಾಧರ ಬೆಂಗಳೂರಿನ ಹೆಮ್ಮೆ. ಹೀಗಾಗಿ ಬಿಬಿಎಂಪಿ ಈ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.