ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರು ಹಾಗೂ ವಿದ್ಯುತ್ ಪೂರೈಕೆಯ ಅಭಾವ ಎದುರಾಗಿದ್ದು, ಬೇಡಿಕೆಯಷ್ಟು ನೀರು, ವಿದ್ಯುತ್ ಪೂರೈಕೆ ಮಾಡಲಾಗದೇ ಬೆಸ್ಕಾಂ ಮತ್ತು ಜಲಮಂಡಳಿ ಹೈರಾಣಾಗಿವೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.
ಹೌದು. ಸಿಲಿಕಾನ್ ಸಿಟಿಯಲ್ಲಿ ಸರಾಸರಿ ನೀರು ಪೂರೈಕೆಯ ಮಿತಿ ಗರಿಷ್ಠ ಮಟ್ಟ ತಲುಪಿದೆ. ಜಲ ಮಂಡಳಿಯಿಂದ ನಿತ್ಯ 1390 ದಶಲಕ್ಷ ಲೀಟರ್ ನೀರಷ್ಟೇ ಪೂರೈಕೆ ಮಾಡಲು ಸಾಧ್ಯ. ಆದರೆ ಸದ್ಯ ನೀರಿನ ಬೇಡಿಕೆ ನಿತ್ಯ 1500 ರಿಂದ 1700 ದಶ ಲಕ್ಷ ಲೀಟರ್ ದಾಟಿದೆ. ಹೀಗಾಗಿ ಬೆಂಗಳೂರಿಗರ ನೀರಿನ ದಾಹ ದಿನೇ ದಿನೇ ಆತಂಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆಯೂ 2026ಕ್ಕೆ ಮುಗಿಯಲಿದ್ದು, ಅಲ್ಲಿಯವರೆಗೂ ಬೆಂಗಳೂರಿಗೆ ಬೇಡಿಕೆಯಷ್ಟು ನೀರು ಪೂರೈಕೆ ಮಾಡುವುದು ಕಷ್ಟ ಸಾಧ್ಯ ಎಂದು ಜಲಮಂಡಳಿ ತಿಳಿಸಿದೆ.
Advertisement
Advertisement
ಇತ್ತ ವಿದ್ಯುತ್ ಬಳಕೆಯೂ ಗರಿಷ್ಟ ಮಿತಿ ದಾಟಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ನಗರದಲ್ಲಿ ಬರೋಬ್ಬರಿ ಗರಿಷ್ಠ 6,156 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ. ಸದ್ಯ ನಗರದಲ್ಲಿ ಸರಾಸರಿ 5,500 ಮೆ.ವ್ಯಾ.ನಷ್ಟು ಬೇಡಿಕೆಯಿದ್ರೆ ಪೂರೈಕೆ ಸುಲಭವಾಗಿದ್ದು, ಆದರೆ ಏಕಾಏಕಿ ನಗರವಾಸಿಗಳ ವಿದ್ಯುತ್ ಬಳಕೆಯಿಂದ 600 ಮೆಗಾವ್ಯಾಟ್ ಬೇಡಿಕೆ ಹೆಚ್ಚಳವಾಗಿದೆ.
Advertisement
ವಿದ್ಯುತ್ ಉಪಕರಣಗಳ ಬಳಕೆ ಪ್ರಮಾಣ ಏರಿಕೆ, ಕೈಗಾರಿಕಾ ವಿದ್ಯುತ್ ಬಳಕೆ ಹೆಚ್ಚಳ, ಕೃಷಿ ಪಂಪ್‍ಸೆಟ್ ಬಳಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಪೈಕಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ.
Advertisement
ರಾಜ್ಯದಲ್ಲಿ ನಿತ್ಯ ಸರಾಸರಿ ವಿದ್ಯುತ್ ಬೇಡಿಕೆ 10,500 ಮೆಗಾವ್ಯಾಟ್‍ನಿಂದ 11,500 ಮೆ.ವ್ಯಾ.ನಷ್ಟಿದೆ. ಬೆಸ್ಕಾಂ ಅಡಿಯಲ್ಲಿರುವ ಎಂಟು ಜಿಲ್ಲೆಗಳಲ್ಲಿ ನಿತ್ಯ ಸರಾಸರಿ 5,500 ಮೆ.ವ್ಯಾ ವಿದ್ಯುತ್ ಬೇಡಿಕೆ ಇದೆ. ಅಂದರೆ ರಾಜ್ಯದಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು ಶೇ. 45 ರಿಂದ ಶೇ.50ರಷ್ಟು ವಿದ್ಯುತ್ ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಬಳಕೆಯಾಗುತ್ತಿದೆ. ಉಳಿದ ನಾಲ್ಕು ಎಸ್ಕಾಂ ವ್ಯಾಪ್ತಿಯ 22 ಜಿಲ್ಲೆಗಳಲ್ಲಿ ಶೇ.50ರಿಂದ ಶೇ. 55ರಷ್ಟು ಮಾತ್ರ ವಿದ್ಯುತ್ ಬಳಕೆಯಾಗುತ್ತಿದೆ.