ಮನೆಮಂದಿಯೆಲ್ಲ ಒಂದಾಗಲು ಹಬ್ಬವೊಂದು ನೆಪ. ಓದು, ಉದ್ಯೋಗದ ಕಾರಣಕ್ಕೆ ದೂರವೇ ಉಳಿದವರನ್ನು ಹಬ್ಬ ಊರು ಅಥವಾ ಮನೆಗೆ ಕರೆಸಿಕೊಳ್ಳುತ್ತದೆ. ಆದ್ರೆ ಅನಿವಾರ್ಯ ಕಾರಣಕ್ಕೆ ಊರಿಗೆ ಹೋಗಲಾಗದಿದ್ದರೆ ಮಾತ್ರ ಜೊತೆಗಿರದ ಭಾವವೊಂದು ಪರಿಪರಿಯಾಗಿ ಕಾಡಿಬಿಡುತ್ತದೆ ಅಲ್ಲವೇ ಹಾಗೆಯೇ ಈ ಯುಗಾದಿ ಹಬ್ಬವೂ ಹಾಗೆಯೇ ಇರಬೇಕಲ್ಲವೇ.
ಚೈತ್ರಮಾಸದ ಮೊದಲ ದಿನವೆಂದರೆ ಹಾಗೇ ಹೊಸ ಮಾಸದ ಘಮಲು, ಹೊಸ ಭರವಸೆಯ ಕನಸು. ಹಳೆಯದೆಲ್ಲವ ಅಳಿಸಿ, ಹೊಸತಾಗುವ ಈ ಹಬ್ಬ ವರ್ಷಾರಂಭದ ಸಂಕೇತ. ಇದು ಹಿಂದೂಗಳ ಹೊಸ ವರ್ಷವೆಂಬ ಯುಗಾದಿ ಹಬ್ಬದ ಹೆಗ್ಗುರುತು.
ಬೇವು ಬೆಲ್ಲ, ಹೋಳಿಗೆ ತುಪ್ಪದ ಸಿಹಿ ಊಟದ ರುಚಿ, ಹಬ್ಬಕ್ಕೆ ಖರೀದಿಸಿದ ಹೊಸ ಬಟ್ಟೆ ಊರಿನ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದ ಮಾತುಕತೆ, ಗೆಳೆಯರೆಲ್ಲ ಕೂಡಿದ ನೆನಪಿಗೆ ಹಳೆಯ ಆಟ, ಹೊಸದಾಗಿ ಮದುವೆ ಆದ ಸ್ನೇಹಿತನ ಕಾಲೆಳೆಯುವುದು, ಮದುವೆ ಫಿಕ್ಸ್ ಆದ ಕ್ಲಾಸ್‌ಮೇಟ್ ಹುಡುಗಿಯ ಶಾಲೆಯ ಕಥೆ ಎಲ್ಲಾ ಮಿಸ್ ಆದಂತಹ ಭಾವ. ಆದರೆ ಹಬ್ಬ ಅಂದ್ರೆ ಹಬ್ಬಾನೇ ಅಲ್ವಾ? ಹಬ್ಬಕ್ಕೆ ಊರಿಗೆ ಹೋಗಲಾಗದೇ, ಅಲ್ಲಿ ಮಾಡುತ್ತಿದ್ದ ಹಬ್ಬವನ್ನು ಇನ್ಯಾವುದೋ ಊರಲ್ಲಿ, ಪುಟ್ಟ ಕೊಣೆಯಲ್ಲಿ ಉಳಿದು ಮಾಡುವ ಆಸೆ ಮೂಡುವುದೇ ಇಲ್ಲ.
ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳ ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಅದೊಂದು ಪುಟ್ಟ ಊರು ಇದ್ದ ಹಾಗೆ. ಅಲ್ಲಿನ ಮನೆಗಳ ಕೆಲವರು ಊರಿಗೆ ಹೋಗಿದ್ದರೆ ಉಳಿದವರದ್ದೆಲ್ಲ ಸೇರಿ ಒಂದು ಹಬ್ಬ ಎಲ್ಲಿಂದಲೋ ಬಂದವರು ಒಂದು ಕಡೆ ನಿಂತವರು. ಒಂದೊಂದು ಊರಿನಲ್ಲಿ ಒಂದೊಂದು ಥರದ ಹಬ್ಬ ಆ ಎಲ್ಲಾ ಆಚರಣೆಗಳು ಸೇರಿದ ಹಬ್ಬ ಇವರದ್ದು. ಹಬ್ಬದ ಹಿಂದಿನ ರಾತ್ರಿ ಹೊತ್ತಿಗಾಗಲೇ ಊರಿಗೆ ಹೋದವರು, ಹೋಗದೇ ಉಳಿದವರ ಪಟ್ಟಿ ಸಿಕ್ಕಿಬಿಡುತ್ತದೆ.
ಹೋದವರ ಸ್ಟೇಟಸ್‌ಗಳಲ್ಲಿ ಊರಿನ ಒಂದು ಚಿತ್ರ, ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ಮೆಸೇಜು ಈ ರೀತಿ ಇದ್ದರೆ, ಊರಿಗೆ ಹೋಗದವರ ಮೊಬೈಲ್‌ಗಳು ಕೂಡ ಬಿಝಿಯಾಗುತ್ತವೆ. ಒಬ್ಬೊಬ್ಬರೇ ಇರುವವರು ಒಂದು ಕಡೆ ಸೇರಲು ಪ್ಲ್ಯಾನ್ ರೆಡಿಯಾಗುತ್ತದೆ.
ಇನ್ನೂ ಬ್ಯಾಚ್ಯುಲರ್ ಲೈಫು ನೋಡೋದಾದ್ರೆ ಅವರಿಗೆ ಸಿಗುವ ಹಬ್ಬದಡುಗೆಯ ರುಚಿಯೇ ಬೇರೆ. ಬಾಡಿಗೆ ಮನೆಯಲ್ಲಿ ಓನರ್‌ಗಳು ಕೊಡುವ ಬೇವು, ಬೆಲ್ಲದ ತಿಂದು ಸಂಜೆ ಹೊತ್ತಿಗೆ ಒಂದಿಷ್ಟು ಹೋಳಿಗೆ ಊಟ. ಹೇಗೋ ಅಕ್ಕಪಕ್ಕದ ಮನೆಯವರು ಕೊಟ್ಟಿದ್ದನ್ನೆಲ್ಲ ಸೇರಿಸಿ ಹಬ್ಬ ಮುಗಿಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಏನೆಲ್ಲಾ ಆಯ್ತು.. ಅಂತ ಒಂದು ಸುತ್ತು ನೆನೆಸಿಕೊಂಡು ಹಾಗೇ ಕ್ಲಿಕ್ಕಿಸಿಕೊಂಡ ಒಂದೆರಡು ಫೋಟೋಗಳನ್ನ ಸ್ಟೇಟಸ್ ಹಾಕಿ, ಮಾರನೆ ದಿನ ಬೆಳಗ್ಗೆ 7 ಗಂಟೆ ಶಿಫ್ಟ್ ಕೆಲಸಕ್ಕೆ ಹೋಗುವ ಧಾವಂತಕ್ಕೆ ಯುಗಾದಿ ಹಬ್ಬ ಮುಗಿದೇ ಹೋಗಿರುತ್ತದೆ.