ಹನೋಯ್: ನವಜಾತ ಶಿಶುಗಳು ಸಾಮಾನ್ಯವಾಗಿ 2 ರಿಂದ 3 ಕೆಜಿ ತೂಕವಿರುತ್ತವೆ. ಆದ್ರೆ ವಿಯೆಟ್ನಾಮ್ ನಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 7 ಕೆಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇಲ್ಲಿನ ನಾರ್ತನ್ ವಿನ್ ಫುಕ್ ಪ್ರಾಂತ್ಯದಲ್ಲಿ ಈ ಮುದ್ದಾದ ಮಗು ಶನಿವಾರದಂದು ಜನಿಸಿದ್ದು, ಇದು ಈ ವಿಯೆಟ್ನಾಮ್ ನಲ್ಲೇ ಅತ್ಯಂತ ಹೆಚ್ಚು ತೂಕದೊಂದಿಗೆ ಜನಿಸಿದ ಮಗು ಎಂದು ವರದಿಯಾಗಿದೆ.
Advertisement
ನಮ್ಮ ಮಗು 7.1 ಕೆಜಿ(15.7 ಪೌಂಡ್ಸ್) ತೂಕವಿದೆ ಎಂದು ಹೇಳಿದಾಗ ನಮಗೆ ನಂಬಲಾಗಲಿಲ್ಲ ಎಂದು ಮಗುವಿನ ತಂದೆ ಟ್ರಾನ್ ವಾನ್ ಕ್ವಾನ್ ಹೇಳಿದ್ದಾರೆ. ಮಗು ಸುಮಾರು 5 ಕೆಜಿ ತೂಕವಿರಬಹುದು ಎಂದು ವೈದ್ಯರು ಮೊದಲೇ ಮಗುವಿನ ತಾಯಿ ಗುಯೇನ್ ಕಿಮ್ ಲೈನ್‍ಗೆ ಹೇಳಿದ್ದರು. ಆದ್ರೆ 2 ಕೆಜಿ ಹೆಚ್ಚುವರಿ ತೂಕವಿದ್ದಿದ್ದು ನೋಡಿ ತಾಯಿಗೂ ಆಶ್ಚರ್ಯವಾಗಿದೆ.
Advertisement
Advertisement
ವೈದ್ಯರು ಮಗುವಿನ ತೂಕವನ್ನ ಖಚಿತಪಡಿಸಿಕೊಳ್ಳಲು ತಾಯಿಯ ರೂಮಿಗೆ ಮಗುವನ್ನ ತಂದ ನಂತರ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಆಗಲೂ ಕೂಡ ತಕ್ಕಡಿ ಸುಳ್ಳು ಹೇಳಲಿಲ್ಲ. ಉಡುಪಿನ ಸಹಿತ ಮಗು 7.2 ಕೆಜಿ ತೂಕವಿತ್ತು.
Advertisement
ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗುವಿಗೆ ಟ್ರಾನ್ ಟೀನ್ ಕ್ವೋಕ್ ಎಂದು ಹೆಸರಿಡಲಾಗಿದೆ. ದಂಪತಿಗೆ ಇದು ಎರಡನೇ ಮಗುವಾಗಿದ್ದು, ಮೊದಲನೇ ಮಗು ಹುಟ್ಟಿದಾಗ 4.2 ಕೆಜಿ ತೂಕವಿತ್ತು ಎಂದು ವರದಿಯಾಗಿದೆ.
2008ರಲ್ಲಿ ವಿಯೆಟ್ನಾಮ್ ನ ಜಿಯಾ ಲೈ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರು 7 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದು ಸುದ್ದಿಯಾಗಿತ್ತು. 2016ರ ಮೇನಲ್ಲಿ ಹಾಸನದ ನಂದಿನಿ 6.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದರು. ಇದು ಈವರೆಗೆ ಭಾರತದಲ್ಲಿ ಅತೀ ಹೆಚ್ಚು ತೂಕದೊಂದಿಗೆ ಜನಿಸಿದ ಮಗುವಾಗಿದೆ. ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ 1955ರಲ್ಲಿ ಇಟಲಿಯ ಅವೆರ್ಸಾದಲ್ಲಿ ಜನಿಸಿದ 10.2 ಕೆಜಿ ತೂಕದ ಮಗು ಜಗತ್ತಿನಲ್ಲೇ ಈವರೆಗೆ ಅತ್ಯಂತ ಹೆಚ್ಚು ತೂಕದೊಂದಿಗೆ ಜನಿಸಿದ ಮಗುವಾಗಿದೆ.