ಉಡುಪಿ: ಮಳೆಗಾಲದಿಂದಾಗಿ ಹಾವು (Snake), ವಿಷ ಜಂತುಗಳು ಪ್ರತ್ಯಕ್ಷವಾಗತೊಡಗಿದೆ. ಬೆಚ್ಚನೆಯ ಸ್ಥಳ ಅರಸಿ ಬರುವ ಹಾವುಗಳು ಕಾರು ಮತ್ತು ಬೈಕ್‌ಗಳ ಆಸನದ ಕೆಳ ಭಾಗ, ಹೆಲ್ಮೆಟ್, ಶೂ ಒಳ ಭಾಗದಲ್ಲಿ ಅವಿತುಕೊಳ್ಳುವ ಸಾಧ್ಯತೆಗಳೂ ಇವೆ. ಹಾಗಾಗಿ ಮಳೆಗಾಲದಲ್ಲಿ (Rainy Season) ಹಾವು, ವಿಷಜಂತುಗಳ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸುವ ಅಗತ್ಯವೂ ಅಷ್ಟೇ ಇದೆ.
Advertisement
ಫ್ರಿಡ್ಜ್‌ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ (Cauliflower) ಹಾವಿನ ಮರಿ ಕಂಡು ಮನೆಮಂದಿ ಹೌಹಾರಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾಪು ತಾಲೂಕು ಪಡುಬಿದ್ರೆಯಲ್ಲಿ ಬೇಂಗ್ರೆಯ ಮಹಿಳೆಯೋರ್ವರು ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು. ಅಡುಗೆ ಮಾಡುವುದಕ್ಕಾಗಿ ಫ್ರಿಡ್ಜ್‌ನಲ್ಲಿಟ್ಟಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ಹೌಹಾರಿದ್ದಾರೆ. ಕೈಯಲ್ಲಿದ್ದ ತರಕಾರಿಯನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೊರಕ್ಕೆ ಓಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇದು ಮರಿ ಹೆಬ್ಬಾವು ಎಂದು ಉರಗ ತಜ್ಞರು ಗುರುತಿಸಿದ್ದಾರೆ.
Advertisement
Advertisement
ಕಾಪುವಿನ ಸ್ಥಳೀಯ ಸುರೇಶ್ ಮಾಹಿತಿ ನೀಡಿ, ಮಳೆಗಾಲದಲ್ಲಿ ಹಾವು, ಹುಳಹುಪ್ಪಟೆಗಳು ಮರಿ ಇಡುವ ಸಂದರ್ಭ ಸುರಕ್ಷಿತ ಪ್ರದೇಶವನ್ನು ಅರಸುತ್ತದೆ. ಹೀಗಾಗಿ ಹಾವಿನ ಮರಿ ಹೂಕೋಸಿನ ಒಳಗೆ ಅವಿತುಕೊಂಡಿರಬಹುದು. ತರಕಾರಿ ಖರೀದಿಸುವಾಗ ಮತ್ತು ಬಳಸುವಾಗ ಬಹಳ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.