ಹಾಸನ: ನಾಲ್ಕೈದು ದಿನಗಳ ಕಾಲ ಕೆಸರಿನ ಸಿಲುಕಿ ಮೂಕ ವೇದನೆ ಅನುಭವಿಸಿದ್ದ ಹೆಣ್ಣಾನೆಯೊಂದು ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದಾಗಿ ಸಾವಿನ ದವಡೆಯಿಂದ ಪಾರಾಗಿ ಬಂದ್ರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಸಾವಿನ ಮನೆ ಸೇರಿದೆ. ಅಮ್ಮನಿಗಾಗಿ ಅದರ ಸುತ್ತಲೂ ಪರಿಪರಿಯಾಗಿ ಹಲುಬಿದ, ಬಿಟ್ಟೋಗ್ಬೇಡಮ್ಮ ಎಂದು ಘೀಳಿಟ್ಟು ನರಳಾಡಿದ ಮರಿಯಾನೆ ಈಗ ತಬ್ಬಲಿಯಾಗಿದೆ. ಮರಿಯಾನೆ ತನ್ನದೇ ಭಾಷೆಯಲ್ಲಿ ಅಮ್ಮಾ, ಅಮ್ಮಾ ಅಂತ ಒಂದೇ ಸಮನೆ ಗೋಳಾಡುತ್ತಿರುವ ದೃಶ್ಯ ಮನ ಕಲಕುವಂತಿದೆ.
ಸಕಲೇಶಪುರ ತಾಲೂಕು ಕಡದರಹಳ್ಳಿ ಬಳಿಯ ಕಾಫಿ ತೋಟದ ಗುಂಡಿಯಲ್ಲಿ ಹೂತು, ಪ್ರಯಾಸದಿಂದ ಹೊರ ಬಂದಿದ್ದ 25 ವರ್ಷದ ಹೆಣ್ಣಾನೆಯ ಬದುಕುವ ಆಸೆ ಶಾಶ್ವತವಾಗಿ ಅದೇ ಮಣ್ಣು ಸೇರಿದೆ. ವಾರದ ಹಿಂದೆ ನೀರಿನ ದಾಹ ನೀಗಿಸಿಕೊಳ್ಳಲು ಕಾಲು ಮುರಿತದ ನೋವಿನ ನಡುವೆಯೂ ಕರುಳ ಕುಡಿಯೊಂದಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುತ್ತಿದ್ದ ಹೆಣ್ಣಾನೆ, ಗುಂಡಿಯಲ್ಲಿ ಕಂಡ ನೀರು ಕುಡಿಯಲು ಹೋಗಿ ಅಲ್ಲೇ ಹೂತುಕೊಂಡಿತ್ತು. ಬರೋಬ್ಬರಿ ನಾಲ್ಕೈದು ದಿನಗಳ ಸತತ ಕಾರ್ಯಾಚರಣೆ ನಂತರ ತುಂಬಾ ಪ್ರಯಾಸ ಪಟ್ಟು ಅರಣ್ಯ ಇಲಾಖೆಯವರು 2 ಪಳಗಿದ ಆನೆ ಮತ್ತು ಜೆಸಿಬಿ ಸಹಾಯದಿಂದ ಬಹುತೇಕ ಮುಳುಗಿದ್ದ ಆನೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
Advertisement
Advertisement
ಪೆಟ್ಟಿನ ಮೇಲೆ ಮತ್ತೊಂದು ಪೆಟ್ಟು ಎಂಬಂತೆ ಆನೆ ಕಾಲು ಮುರಿದ ಭಾಗ ಬಹುತೇಕ ಊದುಕೊಂಡಿದ್ದರಿಂದ ಕೆಸರು ಗುಂಡಿಯಿಂದ ಮೇಲೆತ್ತಿದರೂ ನಿಲ್ಲಲಾಗದ ಸಂಕಷ್ಟ ಸ್ಥಿತಿ ಆನೆಯದಾಗಿತ್ತು. ರಕ್ಷಣೆ ಮಾಡಿದ ಆನೆಗೆ ಕಳೆದ 2 ದಿನಗಳಿಂದ ಚಿಕಿತ್ಸೆ ನೀಡಲಾಯಿತಾದ್ರೂ, ಗ್ಯಾಂಗ್ರಿನ್ ನಿಂದಾಗಿ ಗುರುವಾರ ಬೆಳಗ್ಗೆ ಹೆಣ್ಣಾನೆ ಮೃತಪಟ್ಟಿದೆ. ನೋವಿನಿಂದ ನರಳುತ್ತಿದ್ದ ಆನೆ ನೋವಿನಲ್ಲೇ ಕೊನೆಯುಸಿರೆಳೆದಿದೆ. ಸ್ಥಳದಲ್ಲೇ ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಕಳೇಬರವನ್ನು ಅಲ್ಲೇ ದಹನ ಮಾಡಲಾಯಿತು. ಮರಿಯಾನೆಯನ್ನು ಶಿವಮೊಗ್ಗದ ಸಕ್ರೇಬೈಲು ಆನೆ ಶಿಬಿರಕ್ಕೆ ಬಿಡಲು ನಿರ್ಧರಿಸಲಾಗಿದೆ.
Advertisement
Advertisement
ಕೆಸರಿಂದ ಮೇಲೆ ಬಂದ ನಂತರ ಅಬ್ಬಾ! ಹೆತ್ತಮ್ಮ ನನ್ನ ಬಿಟ್ಟು ಹೋಗಲಿಲ್ಲ ಎಂಬ ಮರಿಯಾನೆಯ ಕನಸು ನುಚ್ಚು ನೂರಾಗಿದೆ. ತಾಯಿ ಇನ್ನಿಲ್ಲ ಅನ್ನೋ ನೋವಿನ ಸಂಕಟದಿಂದ ಮರಿಯಾನೆ ಮೌನಕ್ಕೆ ಶರಣಾಗಿದೆ. ಆದರೂ ಹೇಗಾದರೂ ನನ್ನಮ್ಮ ಬದುಕಿ ಬಂದಾಳು ಎನ್ನುವ ಕೊನೆ ಆಸೆಯಿಂದ ಅಮ್ಮನ ಹೊರತಾಗಿ ಬೇರೇನೂ ಗೊತ್ತಿಲ್ಲದ ಮರಿಯಾನೆ ಘೀಳಿಡುತ್ತಿದ್ದ ದೃಶ್ಯ ನೆರೆದಿದ್ದ ಮನುಷ್ಯರ ಮನಸ್ಸು ಭಾರವಾಗುವಂತೆ ಮಾಡಿತು.
ತಬ್ಬಲಿ ಮರಿ ಎಷ್ಟೇ ಆಲಾಪಿಸಿದರೂ, ಇನ್ನೆಂದೂ ಮಗನ ಆಕ್ರಂದನವನ್ನು ತಾಯಿ ಕೇಳಿಸಿಕೊಳ್ಳದು. ಆದರೆ ಹೆಣ್ಣಾನೆ ಸಾವಿಗೆ ಅರಣ್ಯ ಇಲಾಖೆ ಹಾಗೂ ಸರ್ಕಾದ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆನೆ ಅಪಾಯದಲ್ಲಿರುವ ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದರೆ ನರಳುತ್ತಿದ್ದ ಆನೆಯನ್ನು ಬದುಕಿಸಬಹುದಿತ್ತು. ಆದರೆ ಈ ವಿಷಯದಲ್ಲಿ ಸಂಬಂಧಪಟ್ಟವರ ವಿಳಂಬದಿಂದಾಗಿ ಆನೆ ಅಸು ನೀಗಿದೆ. ಬದುಕುಳಿದಿರುವ ಮರಿಯಾನೆಯನ್ನು ನಮಗೆ ದತ್ತುಕೊಟ್ಟು ಬಿಡಿ. ಇಲ್ಲವೇ ಆಲೂರು ತಾಲೂಕು ನಾಗಾವರ ಬಳಿಯ ನೂತನ ಆನೆ ಶಿಬಿರದಲ್ಲಿ ಆರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv