ಮುಂಬೈ: ಬದಲಿ ಚುಚ್ಚು ಮದ್ದು ನೀಡಿದುದರ ಪರಿಣಾಮ 2 ವರ್ಷದ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಗೋವಂಡಿಯ ನೂರ್ ಆಸ್ಪತ್ರೆಯಲ್ಲಿ ನಡೆದಿದೆ. ಚುಚ್ಚು ಮದ್ದನ್ನು ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದ 18 ವರ್ಷದ ಸ್ವಚ್ಛತಾ ಸಿಬ್ಬಂದಿ ನೀಡಿರುವ ವಿಷಯ ಆಘಾತ ತಂದಿದೆ.
ಲೂಸ್ ಮೋಶನ್ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಮಗುವನ್ನು ಜನವರಿ 8 ರಂದು ನೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ದಾಖಲಾಗಿದ್ದ ವಾರ್ಡ್ನಲ್ಲಿಯೇ ಮತ್ತೊಬ್ಬ ಮಲೇರಿಯಾ ರೋಗಿ ದಾಖಲಾಗಿದ್ದ. ಆತನಿಗೆ ನೀಡಬೇಕಿದ್ದ ಚುಚ್ಚು ಮದ್ದನ್ನು ತಪ್ಪಾಗಿ ಮಗುವಿಗೆ ನೀಡಲಾಗಿದೆ. ಇದರಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು
ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಚತಾ ಸಿಬ್ಬಂದಿ ಚುಚ್ಚು ಮದ್ದನ್ನು ನೀಡಿರುವ ವಿಷಯ ತಿಳಿದು ಬಂದಿದೆ. ಇದರಿಂದ ಜನವರಿ 13ರಂದು ಮಗು ಸಾವನ್ನಪ್ಪಿದೆ. ವಿಷಯ ತಿಳಿದ ಪೋಷಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಮಗುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ 3 ವರ್ಷದ ಬಾಲಕಿ ಬಲಿ
ಮಗುವನ್ನು ಕಳೆದುಕೊಂಡ ಕುಟುಂಬ ಬುಧವಾರ ಆಸ್ಪತ್ರೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆ ಮಾಲೀಕ ನಾಸಿರುದ್ದೀನ್ ಸೈಯದ್(63), ಡಾ. ಅಲ್ತಫ್ ಖಾನ್, ನರ್ಸ್ ಸಲೀಮುನ್ನಿಸಾ ಖಾನ್(21) ಹಾಗೂ ಸ್ವಚ್ಛತಾ ಸಿಬ್ಬಂದಿ ನರ್ಗೀಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.