ಕಾರ್ಡಿಫ್: ಬ್ರಿಟನ್‍ನ ವೇಲ್ಸ್‍ನಲ್ಲಿ ಗ್ಯಾಸ್ಟ್ರೋಚೈಸಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಮಗುವೊಂದು ದೇಹದ ಹೊರಭಾಗದಲ್ಲಿ ಕರುಳು ಹೊಂದಿತ್ತು. ಇದೀಗ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಮಗುವಿನ ಶಸ್ತ್ರಚಿಕಿತ್ಸೆ ಮೇ ನಲ್ಲಿ ನಡೆದಿದ್ದರೂ, ಈಗ 21 ವರ್ಷದ ತಾಯಿ ಕೋಲ್ ವಾಲ್ಟರ್ಸ್ ಮಗುವಿನ ಫೋಟೋವನ್ನ ಹಂಚಿಕೊಂಡು ಈ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಅವಾ-ರೋಸ್ ನೈಟಿಂಗೇಲ್ ಹೆಸರಿನ ಮಗುವಿಗೆ ಜನನಕ್ಕೂ ಮುನ್ನ ಹೊಟ್ಟೆಯ ಭಾಗ ಸರಿಯಾಗಿ ಬೆಳವಣಿಗೆಯಾಗದ ಕಾರಣ ಅದರ ಕರುಳು ದೇಹದಿಂದ ಹೊರಗಡೆ ಇತ್ತು. ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕರುಳನ್ನ ಅದರ ಸ್ಥಾನಕ್ಕೆ ಸೇರಿಸಿದ್ದಾರೆ.
ಮಗು ಹುಟ್ಟಿದ ಕೆಲವು ಗಂಟೆಗಳಲ್ಲಿ ಈ ಫೋಟೋ ತೆಗೆಯಲಾಗಿದೆ. 3 ಸಾವಿರದಲ್ಲಿ ಒಂದು ಮಗುವಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಗುವಿಗೆ ಇನ್ಫೆಕ್ಷನ್ ಆಗಬಾರದೆಂದು ಅವರ ಮೈ ಮೇಲೆ ತೆಳುವಾಗ ಪ್ಲಾಸ್ಟಿಕ್ ಪದರ ಸುತ್ತಿರೋದನ್ನ ಫೋಟೋದಲ್ಲಿ ಕಾಣಬಹುದು. ಮಗು ಹುಟ್ಟಿದ ಕೆಲವು ಗಂಟೆಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಮಗುವಿನ ತಾಯಿಗೆ ಮೊದಲೇ ಶಸ್ತ್ರಚಿಕಿತ್ಸೆಯ ಪರಿಣಾಮಗಳ ಬಗ್ಗೆ ತಿಳಿಸಿದ್ದರು.
ವೈದ್ಯರು ಹೇಳಿದ್ದನ್ನು ಕೇಳಿದ ನಂತರ ಶಸ್ತ್ರಚಿಕಿತ್ಸೆಗೆ ನನ್ನ ಮಗುವನ್ನು ಕಳುಹಿಸಲು ನಾನು ತುಂಬಾ ಭಯಪಟ್ಟಿದ್ದೆ ಎಂದು ವಾಲ್ಟರ್ಸ್ ಹೇಳಿದ್ದಾರೆ. ಕಾರ್ಡಿಫ್ ಹೀತ್ ಆಸ್ಪತ್ರೆಯಲ್ಲಿ ಸುಮಾರು 3 ಗಂಟೆಗಳ ಕಾಲ ಮಗುವಿಗೆ ಆಪರೇಷನ್ ಮಾಡಿದ್ದು, ಯಶಸ್ವಿಯಾಗಿ ಮಗುವಿನ ಕರಳನ್ನು ದೇಹದೊಳಗೆ ಸೇರಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಮಗುವಿಗೆ 7 ದಿನಗಳ ಕಾಲ ಆಕ್ಷಿಜನ್ ಹಾಕಲಾಗಿತ್ತು. ಈ ವೇಳೆ ಮಗುವಿಗೆ ಆಂತರಿಕವಾಗಿ ಆಹಾರ ನೀಡಲಾಗಿತ್ತು ಎಂದು ವರದಿಯಾಗಿದೆ.