Connect with us

ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ 13 ವಿವಿಧ ಮುಖಂಡರು ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ಈ ಪ್ರಕರಣದ ವಿಚಾರಣೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಬೇಕು, ಅಷ್ಟೇ ಅಲ್ಲದೇ ಎರಡು ವರ್ಷದ ಒಳಗಡೆ ವಿಚಾರಣೆ ಪೂರ್ಣಗೊಳಿಸಬೇಕೆಂದು ಸೂಚಿಸಿದೆ.

ಮಾರ್ಚ್ 6ರಂದು ನಡೆದಿದ್ದ ವಿಚಾರಣೆ ವೇಳೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ವಿರುದ್ಧದ ಆರೋಪಗಳನ್ನು ತಾಂತ್ರಿಕ ಕಾರಣ ಹೇಳಿ ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಅಷ್ಟೇ ಅಲ್ಲದೇ ಪ್ರಕರಣದ ವಿಚಾರಣೆ ತಡವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು.

ಏನಿದು ಪ್ರಕರಣ?
ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ 20 ಮಂದಿ ಬಿಜೆಪಿ ಮುಖಂಡರ ಮೇಲಿದ್ದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 20 ರಂದು ತಾಂತ್ರಿಕ ಕಾರಣ ಹೇಳಿ ಕೈಬಿಟ್ಟಿದ್ದನ್ನು ಹಾಜಿ ಮೆಹಬೂಬ್ ಅಹಮ್ಮದ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಾದ ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಉಮಾ ಭಾರತಿ, ಮಹಂತ ಅವೈದ್ಯನಾಥ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್ ಅವರು ಈ ಪಟ್ಟಿಯಲ್ಲಿ ಸೇರಿದ್ದಾರೆ.

ಬಿಜೆಪಿಗೆ ಹಿನ್ನಡೆ: ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎಲ್‍ಕೆ ಅಡ್ವಾಣಿ ಅವರನ್ನು ಬಿಜೆಪಿ ಆಯ್ಕೆ ಮಾಡುತ್ತದೆ ಎನ್ನುವ ಒಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ ಸುಪ್ರೀಂ ಕೋರ್ಟ್  ವಿಚಾರಣೆಗೆ ಹಾಜರುಗುವಂತೆ ಆದೇಶ ಪ್ರಕಟಿಸಿರುವುದು ಬಿಜೆಪಿ ಮತ್ತು ಎಲ್‍ಕೆ ಅಡ್ವಾಣಿ ಅವರಿಗೆ ಹಿನ್ನಡೆಯಾಗಿದೆ.

 

 

Advertisement
Advertisement