Connect with us

Latest

ಬಾಬ್ರಿ ಮಸೀದಿ ಧ್ವಂಸ ಪ್ರಕರಣ- ಅಡ್ವಾಣಿ ಸೇರಿ 13 ಜನರ ವಿರುದ್ಧ ವಿಚಾರಣೆಗೆ ಸುಪ್ರೀಂ ಅನುಮತಿ

Published

on

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎಲ್‍ಕೆ ಅಡ್ವಾಣಿ ಸೇರಿದಂತೆ 13 ಜನರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಮರುಜೀವ ನೀಡಬೇಕೆಂದು ಕೋರ್ಟ್‍ಗೆ ಸಿಬಿಐ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಶಿ ಸೇರಿದಂತೆ 13 ಜನರ ವಿರುದ್ಧ ವಿಚಾರಣೆಗೆ ಅನುಮತಿ ಸಿಕ್ಕಿದೆ. ಪ್ರಕರಣದ ಕುರಿತಂತೆ ದೈನಂದಿನ ವಿಚಾರಣೆ ನಡೆಸಲು ನ್ಯಾಯಾಧೀಶರು ಆದೇಶಿಸಿದ್ದು, ತೀರ್ಪಿಗೆ 2 ವರ್ಷಗಳ ಗಡುವು ನೀಡಿದ್ದಾರೆ.

1992ರಲ್ಲಿ ಲಕ್ಷಾಂತರ ಕರಸೇವಕರು ಬಾಬ್ರೀ ಮಸೀದಿಯನ್ನು ಕೆಡವಲು ಪ್ರೇರಣೆಯಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಎಲ್‍ಕೆ ಅಡ್ವಾಣಿ, ಉಮಭಾರತಿ ಹಾಗೂ ಮುರಳಿ ಮನೋಹರ್ ಜೋಷಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ರಾಯ್ ಬರೇಲಿಯಲ್ಲಿ ನಡೆಯುತ್ತಿತ್ತು.

ಇದೀಗ ಗಂಭೀರ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಲಕ್ನೋದಲ್ಲಿ ವಿಚಾರಣೆ ನಡೆಯಲಿದೆ. ಮಸೀದಿ ಧ್ವಂಸಗೊಳಿಸಿದ ಆರೋಪದ ಮೇಲೆ 20 ಜನರ ವಿರುದ್ಧ ಮೊತ್ತೊಂದು ಕೇಸ್‍ನ ವಿಚಾರಣೆಯೂ ನಡೆಯುತ್ತಿದ್ದು, ಎರಡೂ ವಿಚಾರಣೆಗಳು ಪೂರ್ಣಗೊಂಡು ಇನ್ನೆರಡು ವರ್ಷಗಳಲ್ಲಿ ತೀರ್ಪು ನೀಡಬೇಕೆಂದು ನ್ಯಾಯಾಧೀಶರು ಹೇಳಿದ್ದಾರೆ.

ಮಸೀದಿ ಧ್ವಂಸ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಸದ್ಯ ರಾಜಸ್ಥಾನದ ರಾಜ್ಯಪಾಲರಾಗಿದ್ದು, ಅಧಿಕಾರದಲ್ಲಿರುವಾಗ ಅವರ ವಿಚಾರಣೆ ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರಾಗಿ ಕಲ್ಯಾಣ್ ಸಿಂಗ್ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಅವರ ವಿಚಾರಣೆ ಆರಂಭವಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಐ ವಾದವೇನು?: ಬಿಜೆಪಿ ನಾಯಕರು ಮಸೀದಿ ಕೆಡವಲು ಪೂರ್ವ ಸಿದ್ಧತೆ ಮಾಡಿದ್ದರು. ಮಸೀದಿ ಕೆಡವಿದ ದಿನ ಸ್ಟೇಜ್ ಮೇಲೆ ಭಾಷಣ ಮಾಡಿದ್ದು ಕೂಡ ಇದರ ಭಾಗವಾಗಿತ್ತು. ಅಡ್ವಾಣಿ ಹಾಗೂ ಇತರೆ ಬಿಜೆಪಿ ನಾಯಕರು ಮಸೀದಿ ಕೆಡವಿದ ಹಿಂದಿನ ದಿನ ಭೇಟಿಯಾಗಿ ಮಸೀದಿ ಧ್ವಂಸಗೊಳಿಸಬೇಕೆಂದು ನಿರ್ಧರಿಸಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಆದ್ದರಿಂದ ಇದೊಂದು ಪೂರ್ವ ಯೋಜಿತ, ಉದ್ದೇಶಪೂರ್ವಕ ಘಟನೆ ಎಂದು ಸಿಬಿಐ ಹೇಳಿತ್ತು.

ಆದ್ರೆ 2010ರಲ್ಲಿ ಅಲಹಾಬಾದ್ ಹೈ ಕೋರ್ಟ್, ಬಿಜೆಪಿ ನಾಯಕರ ವಿರುದ್ಧ ಒಳಸಂಚು ಅರೋಪ ಮಾಡಿದ ಸಿಬಿಐ ವಾದವನ್ನು ತಿರಸ್ಕರಿಸಿತ್ತು. ಹೀಗಾಗಿ ರಾಯ್‍ಬರೇಲಿಯಲ್ಲಿಯೇ ಬಿಜೆಪಿ ನಾಯಕರ ವಿಚಾರಣೆ ಮುಂದುವರೆದಿತ್ತು. ಕೋರ್ಟ್‍ನ ಈ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು.

ಮಸೀದಿ ಇದ್ದ ಜಾಗದಲ್ಲಿ ಮಂದಿರ ಕಟ್ಟಬೇಕೆಂದು ಎಲ್‍ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ಆರಂಭವಾದ ಚಳುವಳಿಯ ಬೆನ್ನಲ್ಲೇ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ ಜನ್ಮ ಭೂಮಿಯ ಸ್ಥಳದಲ್ಲಿ ಮಸೀದಿ ಕಟ್ಟಲಾಗಿದೆ ಎಂದು ಹಿಂದೂಗಳು ನಂಬಿದ್ದು, ಈ ಜಾಗದಲ್ಲಿ ರಾಮ ಮಂದಿರ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಸಂದರ್ಭದಲ್ಲಿ ದೇಶದಾದ್ಯಂತ ಹಿಂದೂ ಹಾಗೂ ಮುಸ್ಲಿಮರ ನಡುವೆ ಘರ್ಷಣೆಗಳು ನಡೆದು ಸುಮಾರು 2 ಸಾವಿರ ಮಂದಿ ಸಾವನ್ನಪ್ಪಿದ್ದರು.

ಏನಿದು ಪ್ರಕರಣ?: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ ಬಿಜೆಪಿ ಮುಖಂಡರ ಮೇಲಿದ್ದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 20 ರಂದು ತಾಂತ್ರಿಕ ಕಾರಣ ಹೇಳಿ ಕೈಬಿಟ್ಟಿದ್ದನ್ನು ಹಾಜಿ ಮೆಹಬೂಬ್ ಅಹಮ್ಮದ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಾದ ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಉಮಾ ಭಾರತಿ, ಮಹಂತ ಅವೈದ್ಯನಾಥ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್ ಅವರು ಈ ಪಟ್ಟಿಯಲ್ಲಿ ಸೇರಿದ್ದಾರೆ.

ಬಿಜೆಪಿಗೆ ಹಿನ್ನಡೆ: ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎಲ್‍ಕೆ ಅಡ್ವಾಣಿ ಅವರನ್ನು ಬಿಜೆಪಿ ಆಯ್ಕೆ ಮಾಡುತ್ತದೆ ಎನ್ನುವ ಒಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರುಗುವಂತೆ ಆದೇಶ ಪ್ರಕಟಿಸಿರುವುದು ಬಿಜೆಪಿ ಮತ್ತು ಎಲ್‍ಕೆ ಅಡ್ವಾಣಿ ಅವರಿಗೆ ಹಿನ್ನಡೆಯಾಗಿದೆ.

Click to comment

Leave a Reply

Your email address will not be published. Required fields are marked *