ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ (Baba Siddique) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಸಿದ್ದಿಕಿಯವರ ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.
ಬಾಬಾ ಸಿದ್ದಿಕಿಯವರಿಗೆ ‘2+1’ ಭದ್ರತೆ ಇತ್ತು. ಅಂದರೆ, ಹಗಲು ಇಬ್ಬರು ಮತ್ತು ರಾತ್ರಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ಅವರ ಭದ್ರತೆಗೆ ನಿಯೋಜಿಸಲಾಗಿತ್ತು. ಸಿದ್ದಿಕಿಯವರು ಬಾಂದ್ರಾಕ್ಕೆ ಹೋಗುವಾಗ ಸಾಮಾನ್ಯವಾಗಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಇರಿಸಿಕೊಳ್ಳುತ್ತಿದ್ದರು. ಅವರ ಹತ್ಯೆಯ ದಿನ ತಮ್ಮ ಮಗನ ಕಚೇರಿಯಿಂದ ಹೊರಡುವ ಮೊದಲು, ರಾತ್ರಿ 8:30ರ ಸುಮಾರಿಗೆ, ಇಬ್ಬರು ಭದ್ರತಾ ಸಿಬ್ಬಂದಿಗಳಲ್ಲಿ ಒಬ್ಬರು ಅಲ್ಲಿಂದ ತೆರಳಿದ್ದರು. ಈ ವೇಳೆ ಒಬ್ಬ ಭದ್ರತಾ ಸಿಬ್ಬಂದಿ ಮಾತ್ರ ಅವರ ಜೊತೆ ಇದ್ದರು. ಗುಂಡಿನ ದಾಳಿ ವೇಳೆ ಸಿದ್ದಿಕಿಯವರ ಜೊತೆಗಿದ್ದ ಭದ್ರತಾ ಸಿಬ್ಬಂದಿ ಯಾವುದೇ ಪ್ರತಿರೋಧ ತೋರಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್‌ಗೆ Y+ ಭದ್ರತೆ
ತನಿಖೆ ವೇಳೆ ಶೂಟರ್‌ಗಳು ಮತ್ತು ಸಂಚುಕೋರ, ಸಿದ್ದಿಕಿಯವರ ಎಸ್ಕಾರ್ಟ್ ವಾಹನದ ಬಳಿ ನಿಂತಿದ್ದರು ಎಂಬುದು ತಿಳಿದು ಬಂದಿದೆ. ಅವರು ಕಚೇರಿಯಿಂದ ಹೊರಬಂದು ಕಾರಿನೊಳಗೆ ಹೋಗಲು ಪ್ರಯತ್ನಿಸಿದಾಗ, ಹಂತಕರು ಸ್ಮೋಕ್ ಬಾಂಬ್ ಎಸೆದು, ಗುಂಡಿನ ದಾಳಿ ನಡೆಸಿದ್ದರು.
ಶೂಟರ್‌ಗಳು ತಮ್ಮೊಂದಿಗೆ ಮೆಣಸಿನ ಪುಡಿಯನ್ನು ತೆಗೆದುಕೊಂಡು ಹೋಗಿದ್ದರು. ಗುಂಡು ಹಾರಿದ ತಕ್ಷಣ ಪೊಲೀಸ್ ಪೇದೆ ಮೇಲೆ ಮೆಣಸಿನ ಪುಡಿ ಎರಚಿದ್ದರು. ಇದರಿಂದ ತನಗೆ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದೀಗ ಭದ್ರತಾ ಸಿಬ್ಬಂದಿಯ ಹೇಳಿಕೆಯನ್ನು ಮುಂಬೈ ಪೊಲೀಸರು ವಿವರವಾಗಿ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಧರ್ಮರಾಜ್ ಕಶ್ಯಪ್ (19) ಹರೀಶ್‌ಕುಮಾರ್ ಬಾಲಕ್ರಮ್ ನಿಸಾದ್ (23) ಮತ್ತು ಪ್ರವೀಣ್ ಲೋಂಕರ್ (28) ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಶಿವಕುಮಾರ್ ಗೌತಮ್‌ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಅ.12 ರಂದು, ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಇದನ್ನೂ ಓದಿ: ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?