ಮುಂಬೈ: ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್ (Shiv Kumar Gautam) ಗುಂಡಿನ ದಾಳಿ ಬಳಿಕ ಸಿದ್ದಿಕಿ ಸಾವನ್ನು ಖಚಿತಪಡಿಸಿಕೊಳ್ಳಲು ಅರ್ಧಗಂಟೆ ಕಾಲ ಆಸ್ಪತ್ರೆಯ ಹೊರಗೆ ಕಾದು ನಿಂತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ದಾಳಿ ನಡೆಸಿದ್ದ ಪ್ರಮುಖ ಆರೋಪಿ ತಾನೂ ಧರಿಸಿದ್ದ ಅಂಗಿಯನ್ನು ತಕ್ಷಣ ಬದಲಿಸಿಕೊಂಡು ಜನರ ಗುಂಪಿನಲ್ಲಿ ಸೇರಿಕೊಂಡಿದ್ದ. ಬಳಿಕ ಆಸ್ಪತ್ರೆಯ ಹೊರಗೆ 30 ನಿಮಿಷ ಕಾದು, ಸಿದ್ದಿಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದ ಬಳಿಕ ಅಲ್ಲಿಂದ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಅರೆಸ್ಟ್ ಆಗಿದ್ದು ಹೇಗೆ?
ಗೌತಮ್‌ನ ನಾಲ್ವರು ಸ್ನೇಹಿತರು ರಾತ್ರಿಯ ವೇಳೆ ಮೊಬೈಲ್ ಫೋನ್‌ಗಳಲ್ಲಿ ನಡೆಸಿದ್ದ ಸಂಭಾಷಣೆಗಳು ಮುಂಬೈ ಪೊಲೀಸರಿಗೆ ಆತನನ್ನು ಪತ್ತೆಹಚ್ಚಲು ಪ್ರಮುಖ ಪಾತ್ರವಹಿಸಿದೆ.
ಮುಂಬೈ (Mumbai) ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ (Uttar Pradesh) ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗೌತಮ್‌ನ ಸ್ನೇಹಿತರಾದ ಅನುರಾಗ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಂದ್ರ ಪ್ರತಾಪ್ ಸಿಂಗ್ ಎಂಬವರನ್ನು ನೇಪಾಳ ಗಡಿಯ ಬಳಿ ಬಂಧಿಸಿತ್ತು. ಈ ವೇಳೆ ಮೊಬೈಲ್ ಪರಿಶೀಲನೆ ವೇಳೆ ಆರೋಪಿಗಳು ಗೌತಮ್ ಜೊತೆ ಇಂಟರ್‌ನೆಟ್ ಕರೆ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅಲ್ಲದೇ ಆತನನ್ನು ಅರಣ್ಯ ಪ್ರದೇಶದಲ್ಲಿ ಭೇಟಿಯಾಗಲು ಯೋಜನೆ ಹಾಕಿಕೊಂಡಿದ್ದರು. ಈ ಮೂಲಕ ಆತನಿಗೆ ದೇಶದಿಂದ ಪರಾರಿಯಾಗಲು ಸಹಾಯಕ್ಕೆ ಮುಂದಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಈ ವಿಚಾರ ತಿಳಿದ ಬಳಿಕ ಗೌತಮ್ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಬಳಿಕ ಉತ್ತರ ಪ್ರದೇಶದ ಕುಗ್ರಾಮವೊಂದರಲ್ಲಿ ಆತನನ್ನು ಬಂಧಿಸಲಾಗಿತ್ತು.
ಗುಂಡು ಹಾರಿಸಿದ ನಂತರ ಗೌತಮ್ ಪುಣೆಗೆ ಪರಾರಿಯಾಗಿದ್ದ. ಅಲ್ಲಿ ಮೊಬೈಲ್ ಫೋನ್ ಎಸೆದಿದ್ದಾನೆ ಎಂದು ವರದಿಯಾಗಿದೆ. ಒಂದು ವಾರ ಅಲ್ಲೇ ಇದ್ದು, ಬಳಿಕ ಉತ್ತರ ಪ್ರದೇಶದ ಝಾನ್ಸಿ ಮತ್ತು ಲಕ್ನೋಗೆ ತೆರಳಿದ್ದ. ಬಳಿಕ ನನ್ಪಾರಾ ಪಟ್ಟಣದಿಂದ ಸುಮಾರು 10 ಕಿಮೀ ದೂರದಲ್ಲಿರುವ 10 ರಿಂದ 15 ಗುಡಿಸಲುಗಳ ಕುಗ್ರಾಮದಲ್ಲಿ ಅಡಗಿಕೊಂಡಿದ್ದ.
ಆರೋಪಿಗಳ ಆರಂಭಿಕ ಯೋಜನೆಯ ಪ್ರಕಾರ, ತಮ್ಮ ಸಹಚರರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್‌ನನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತು. ಅಲ್ಲಿ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi) ಸದಸ್ಯನೊಬ್ಬ ಆರೋಪಿಗಳನ್ನು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಈ ಯೋಜನೆ ವಿಫಲವಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಅ.12 ರಂದು ರಾತ್ರಿ 9:11 ಗಂಟೆ ವೇಳೆಗೆ ಬಾಂದ್ರಾದಲ್ಲಿ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.