– ಉಡುಪಿಯಲ್ಲಿ ಅಖಿಲಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ
ಉಡುಪಿ: ಪಾರಮಾರ್ಥಿಕ ಸೇವೆಗೆ 5 ಲಕ್ಷ ಕೋಟಿ ರೂ. ಮೀಸಲಿಡಬೇಕೆಂಬ ಕನಸಿದೆ ಎಂದು ಯೋಗ ಗುರು, ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮ್ ದೇವ್ ಆಶಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ 51ನೇ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ಆರಂಭವಾಗಿದೆ. ಪತಂಜಲಿ ಯೋಗ ಪೀಠದ ಯೋಗ ಗುರು ಬಾಬಾ ರಾಮದೇವ್ ಮೂರು ದಿನಗಳ ಈ ಸಮ್ಮೇಳನ ಉದ್ಘಾಟನೆ ಮಾಡಿದರು.
ದೇಶ-ವಿದೇಶಗಳ ನೂರಾರು ವಿದ್ವಾಂಸರು ಈ ಸಮಾವೇಶದಲ್ಲಿ ಭಾಗಿಯಾದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ಆಯೋಜನೆ ಮಾಡಿರುವ 51ನೇ ಐತಿಹಾಸಿಕ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ಆರಂಭಗೊಂಡಿದೆ. ಯೋಗ, ಆಯುರ್ವೇದ, ವೈಷ್ಣವ ಭಕ್ತಿ, ಭಗವದ್ಗೀತೆ, ಇರಾನಿಯನ್ ಪರ್ಶಿಯನ್ ಸಹಿತ 23 ವಿಷಯಗಳ ಬಗ್ಗೆ ವಿವಿಧ ಗೋಷ್ಠಿಗಳು ಆಯೋಜನೆಯಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಬಾಬಾ ರಾಮ್‌ದೇವ್ 5 ಲಕ್ಷ ಕೋಟಿಯ ಕನಸು ಯೋಜನೆ ಬಿಚ್ಚಿಟ್ಟಿದ್ದಾರೆ. ಆಕ್ಸ್‌ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯಗಳ ಕಾಲ ಮುಗಿಯಿತು. ಮುಂದೆ ಗುರುಕುಲದ ಶತಮಾನ ಎಂದಿದ್ದಾರೆ. ಮುಂದೆ ಸಂಸ್ಕೃತದ ಶತಮಾನ, ಮೂಲ ಧರ್ಮ, ಸಂಸ್ಕೃತಿ ಆಚಾರಗಳ ಪಾರಮಾರ್ಥಿಕ ದರ್ಶನಕ್ಕಾಗಿ ಸನಾತನ ಧರ್ಮಗಳ ಸಾಮ್ರಾಜ್ಯ ವಿಶ್ವದಲ್ಲೇ ಪಸರಿಸಬೇಕು. ಅದಕ್ಕಾಗಿ ಐದು ಲಕ್ಷ ಕೋಟಿಯ ಯೋಜನೆ ಎಂದು ಘೋಷಿಸಿದರು.
ಉಡುಪಿಯಲ್ಲಿ 118 ದೇಶಗಳಲ್ಲಿ ನೆಲೆಸಿರುವ 1,500 ಕ್ಕೂ ಹೆಚ್ಚು ಭಾಷಾ ವಿದ್ವಾಂಸರು ಸಮಾಗಮಗೊಂಡಿದ್ದಾರೆ. ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಂಸ್ಕೃತ ಭಾಷೆ ಒಂದು ಪಾತ್ರೆ ಇದ್ದಂತೆ ಅದು ಚೆನ್ನಾಗಿದ್ದರೆ ಅದರಲ್ಲಿ ತಯಾರಾಗುವ ಪಾಯಸ ಚೆನ್ನಾಗಿರುತ್ತದೆ. ಸಂಸ್ಕೃತ ಅತಿ ಶ್ರೇಷ್ಠವಾದ ಭಾಷೆ, ಇಂಗ್ಲಿಷ್ ಪ್ರತಿದಿನ ಪರಿವರ್ತನೆಯಾಗುವ ಭಾಷೆ ಎಂದು ಸಂಸ್ಕೃತದ ಹಿರಿಮೆ ಗರಿಮೆ ಬಗ್ಗೆ ಮಾತನಾಡಿದರು. ವಿಮರ್ಶೆ, ತರ್ಕ, ಚರ್ಚೆ ನಡೆಯುವ ಹಿಂದೂ ಧರ್ಮವೇ ಶ್ರೇಷ್ಠ. ಸನಾತನದಲ್ಲಿ ಸ್ವಾತಂತ್ರ್ಯವಿದೆ ಎಂದರು.
50 ವರ್ಷಗಳ ಬಳಿಕ ದಕ್ಷಿಣ ಭಾರತದಲ್ಲಿ ಈ ಸಮ್ಮೇಳನ ಆಯೋಜನೆಯಾಗಿದೆ. 300ಕ್ಕೂ ಅಧಿಕ ವಿದ್ವಾಂಸರು 2,000 ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಮಠದ ಆಸುಪಾಸು ಹತ್ತಾರು ಗೋಷ್ಠಿಗಳು, ವೇದ, ಭಗವದ್ಗೀತೆ, ಭಾಷಾ ಶಾಸ್ತ್ರಗಳ ವಿಚಾರಮಂಡನೆ ನಡೆಯಲಿದೆ. ಬೌದ್ಧ ಧರ್ಮ, ಪ್ರಾಕೃತ, ಜೈನ ಧರ್ಮ, ಭಾರತೀಯ ಜ್ಞಾನ ಮತ್ತು ವ್ಯವಸ್ಥೆ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಸಮಲೋಚನೆ ನಡೆಯಲಿದೆ.