– ಕೇಸ್ ದಾಖಲಾಗ್ತಿದ್ದಂತೆ ಬಾಬಾ ಎಸ್ಕೇಪ್
ಚಂಡೀಗಢ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಬಾನ ವಿರುದ್ಧ ಹರಿಯಾಣ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ಆರೋಪಿ ಬಾಬಾನನ್ನು ಸ್ವಾಮಿ ಲಕ್ಷಾನಂದ್ ಎಂದು ಗುರುತಿಸಲಾಗಿದೆ. ಈತ ಪಂಚಕುಲ ಜಿಲ್ಲೆಯ ಚೋಟಾ ತ್ರಿಲೋಕ್‍ಪುರದಲ್ಲಿ ಆಶ್ರಮ ನಡೆಸುತ್ತಿದ್ದನು. ಸ್ವಾಮಿ ಲಕ್ಷಾನಂದ್ 14 ಮತ್ತು 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇಬ್ಬರು ಅಪ್ರಾಪ್ತ ಬಾಲಕಿಯರು ಸೇವೆ ಮಾಡಲು ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರಿಬ್ಬರನ್ನು ಬಂಧನದಲ್ಲಿಟ್ಟು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತ ಬಾಲಕಿಯರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯವರಾಗಿದ್ದು, ನಡೆದ ಘಟನೆಯನ್ನು ತಾಯಿಯ ಬಳಿ ಹೇಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.
ಪೊಲೀಸರು ಸ್ವಾಮಿ ಲಕ್ಷಾನಂದ್ ವಿರುದ್ಧ ದೂರು ದಾಖಲಿಸಿದ ನಂತರ ಆರೋಪಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸ್ವಾಮಿ ಲಕ್ಷಾನಂದ್ ವಿರುದ್ಧ ದಾಖಲಾದ ದೂರಿನ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಬ್ಬರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಆಶ್ರಮದಲ್ಲಿ ಮೂರು ದಿನಗಳ ಕಾಲ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಆರೋಪಿ ಬಾಬಾನಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿ ಸ್ವಾಮಿ ಲಕ್ಷಾನಂದ್‍ನನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.