ಹೈದರಾಬಾದ್: ಬಾಹುಬಲಿ ಬಲ್ಲಾಳ ದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರ ಇತ್ತೀಚಿನ ಪೋಸ್ಟ್ ಕಂಡ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಫೋಟೋದಲ್ಲಿ ರಾಣಾ ತೀರ ತೆಳ್ಳಗೆ ಕಾಣುತ್ತಿದ್ದಾರೆ.
ರಾಣಾ ಅವರೇ ತಮ್ಮ ಫೋಟೋವನ್ನು ಜಾಹೀರಾತಿನ ಉದ್ದೇಶದಿಂದ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಫೋಟೋವನ್ನು ಗಮನಿಸಿದ ಅಭಿಮಾನಿಗಳು ರಾಣಾ ಪೋಸ್ಟ್ ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದ್ದಾರೆ.
ಕಳೆದ ಜುಲೈನಲ್ಲಿ ರಾಣಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಸುದ್ದಿ ಕೇಳಿತ್ತು. ಈ ಸಂದರ್ಭದಲ್ಲಿ ಅವರು ಕಿಡ್ನಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅವರಿಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಣಾರ ತಾಯಿ ಅವರೇ ಅವರಿಗೆ ಕಿಡ್ನಿದಾನ ಮಾಡಿದ್ದಾರೆ ಎಂಬ ಸುದ್ದಿಗಳು ಬಾರಿ ಪ್ರಮಾಣದಲ್ಲಿ ಕೇಳಿ ಬಂದಿದ್ದವು.
ಆ ಬಳಿಕ 34 ವರ್ಷದ ರಾಣಾ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಇಂತಹ ಎಲ್ಲಾ ಸುದ್ದಿಗಳು ಸುಳ್ಳು ಎಂದು ಹೇಳುವ ಮೂಲಕ ಅಲ್ಲಗೆಳೆದಿದ್ದರು. ಅಲ್ಲದೇ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದರು.
https://www.instagram.com/p/B3B8U6FjXjC/
ಬಾಹುಬಲಿ ಸಿನಿಮಾಗಾಗಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡುವ ಮೂಲಕ ರಾಣಾ ಭಾರತ ಸಿನಿರಂಗದ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಸದ್ಯದ ಅವರ ಫೋಟೋ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದುವರೆಗೂ ರಾಣಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.