ಬೆಂಗಳೂರು: ಬಾಹುಬಲಿ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಷ್ಟು ಕ್ರೇಜ್ ಸೃಷ್ಠಿ ಮಾಡಿದ್ದ ಚಿತ್ರ ಅದು. ಬಾಹುಬಲಿ ಭಾಗ 2 ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನ ಮುರಿದುಹಾಕಿದ್ದು ಈಗ ಇತಿಹಾಸ. ಇದೇ ಬಾಹುಬಲಿ ಸಿನಿಮಾ ಇದೀಗ ಯಕ್ಷಗಾನ ರೂಪದಲ್ಲಿ ಕನ್ನಡದಲ್ಲಿ ಬಂದಿದೆ.
ಹೌದು. ಬಾಹುಬಲಿ ಚಿತ್ರದ ಯಶಸ್ಸಿನ ಬೆನ್ನಲ್ಲೇ ಆ ಚಿತ್ರದ ಚಿತ್ರಕತೆಯನ್ನು ಆಧರಿಸಿ ವಜ್ರಮಾನಸಿ ಎಂಬ ಯಕ್ಷಗಾನವನ್ನು ರಂಗದ ಮೇಲೆ ಮೊದಲ ಬಾರಿಗೆ ಪ್ರಯೋಗ ಮಾಡಲಾಯಿತು. ಕಳೆದ ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ವಜ್ರಮಾನಸಿ ಭಾಗ 2, ಬಾಹುಬಲಿ ಭಾಗ 2 ಚಿತ್ರದ ಕಥೆಯನ್ನ ಆಧರಿಸಿದ ಯಕ್ಷಗಾನದ ರಂಗರೂಪಕವಾಗಿದೆ. ಸತತ 7 ತಾಸುಗಳ ಯಕ್ಷಗಾನಕ್ಕೆ ನೂರಾರು ಕಲಾಪ್ರಿಯರು ಸಾಕ್ಷಿಯಾಗಿದ್ರು.
ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮದ ವತಿಯಿಂದ ಬಾಹುಬಲಿ ಭಾಗ ಒಂದರ ಕಥೆಯನ್ನ ರಂಗದ ಮೇಲೆ ತಂದು ವಜ್ರಮಾನಸಿ ಹೆಸರಿನಲ್ಲಿ 150ಕ್ಕೂ ಹೆಚ್ಚು ಪ್ರದರ್ಶನಗಳನ್ನ ಮಾಡಿದ್ರು. ಈಗ ಭಾಗ 2ರ ಕಥೆಯನ್ನ ರಂಗದ ಮೇಲೆ ಪ್ರಯೋಗ ಮಾಡ್ತಿದ್ದಾರೆ. ಬಾಹುಬಲಿ ಚಿತ್ರದಿಂದ ಪ್ರೇರೇಪಣೆ ಪಡೆದಿರುವ ಮಾಹಿಶ್ಮತಿ ನಗರದ ವೈಭವ, ರಾಜತಾಂತ್ರಿಕ ಗುಟ್ಟುಗಳ ಅನಾವರಣ, ಶತ್ರುಗಳ ಒಳಮರ್ಮಗಳನ್ನಾಧರಿಸಿದ ಕತೆಯನ್ನು ಹೆಣೆದು ರಂಗ ಪ್ರಯೋಗ ಮಾಡಲಾಗಿದೆ.
ಚಿತ್ರದ ತಿರುಳನ್ನು ತರ್ಜುಮೆ ಮಾಡಿ ಪಾತ್ರಗಳನ್ನು ಸೃಷ್ಟಿಸಿದ್ದ ಯಕ್ಷಗಾನ ನೋಡುಗರ ಕಣ್ಮನ ಸೆಳೆದಿದ್ದು ಯಶಸ್ವಿಯಾಗುವ ನಂಬಿಕೆ ಇದೆ ಅನ್ನೋದು ಈ ಯಕ್ಷಗಾನದ ರಚನಕಾರ ಹಾಗೂ ರಂಗ ನಿರ್ದೇಶಕ ದೇವದಾಸ್ ಅವರ ಅಭಿಮತ.
ಒಟ್ಟಿನಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಅನೇಕ ಹೊಸ ದಾಖಲೆಗಳನ್ನ ಮಾಡಿದ ಬಾಹುಬಲಿ ಚಿತ್ರ ಈಗ ಯಕ್ಷಗಾನ ರೂಪದಲ್ಲಿ ರಂಗದ ಮೇಲೆ ಪ್ರಯೋಗವಾಗುತ್ತಿರುವುದು ಯಕ್ಷಗಾನ ಪ್ರಿಯರಿಗೆ ಸಂತಸ ತಂದಿದೆ.