ಬೆಂಗಳೂರು: ಮುಖ್ಯಮಂತ್ರಿಗಳು ಅತಿ ಹೆಚ್ಚು ಮೊತ್ತದ ಬಜೆಟ್ ಮಂಡಿಸಿದ್ದು, ರಾಜ್ಯದ ಮೇಲೆ ಸಾಲದ ಹೊರೆ 7.6 ಲಕ್ಷ ಕೋಟಿಗೆ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು, ಸಾಲದ ಹೊರೆ ತಗ್ಗಿಸುವ ಸಲುವಾಗಿ ಹಣಕಾಸಿನ ಸಚಿವರು ಯಾವುದೇ ಕ್ರಿಯಾಯೋಜನೆ ರೂಪಿಸಿಲ್ಲ ಎಂದು ವಿವರಿಸಿದರು. ಸರ್ಕಾರದ ಬದ್ಧ ವೆಚ್ಚ, ಗ್ಯಾರಂಟಿಗಳ ವೆಚ್ಚವು ಬಜೆಟ್‍ನ ಶೇ.80 ರಷ್ಟಾಗಿದೆ. ಬಂಡವಾಳ ವೆಚ್ಚಕ್ಕೆ ಸಿಗಬೇಕಾದಷ್ಟು ಅನುದಾನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಸಾಧ್ಯ ಎಂದು ಗಮನಿಸಲು ಕೋರಿದರು.
ಸಾಲದ ಪ್ರಮಾಣ ಒಂದೆಡೆ ಏರುತ್ತಿದೆ. 2025-26ನೇ ಸಾಲಿನ ಅಂತ್ಯಕ್ಕೆ ರಾಜ್ಯ ಸರ್ಕಾರವು 45,600 ಕೋಟಿ ಬಡ್ಡಿ ಪಾವತಿಸಬೇಕಾಗುತ್ತದೆ. 2027-28ಕ್ಕೆ ಸುಮಾರು 60 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಕೇವಲ ಬಡ್ಡಿಗೆ ಮೀಸಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. 2027-28ಕ್ಕೆ ರಾಜ್ಯದ ಒಟ್ಟು ಸಾಲ 9 ಲಕ್ಷ ಕೋಟಿ ದಾಟಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕಡೆ ಬೆಲೆ ಏರಿಕೆ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಹಣದುಬ್ಬರ ಇದೆ. ಶೇ 5.03ರಷ್ಟು ಹಣದುಬ್ಬರ ನಮ್ಮ ರಾಜ್ಯದಲ್ಲಿದ್ದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಅದು 3.39 ರಷ್ಟಿದೆ. ಆಂಧ್ರ ಪ್ರದೇಶದಲ್ಲಿ 4.02, ಗುಜರಾತ್‍ನಲ್ಲಿ 3.88 ರಷ್ಟಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಹಣದುಬ್ಬರ ನಮ್ಮ ರಾಜ್ಯದಲ್ಲಿ ಇದೆ ಎಂದು ಗಮನ ಸೆಳೆದರು.
ಜಿಡಿಪಿ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇದ್ದಾಗ 2022-23ರಲ್ಲಿ ಅದು 14.2 ಶೇಕಡಾದಷ್ಟಿತ್ತು. ಈ ಕಾಂಗ್ರೆಸ್ ಸರ್ಕಾರ ಬಂದ ಬಳಿಕ 2023-24ರಲ್ಲಿ 9.6 ಶೇಕಡದಷ್ಟಾಗಿದೆ. ಅಂದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ 14.2 ಶೇ ಇದ್ದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅದು ಶೇ 9.6ಕ್ಕೆ ಇಳಿದಿದೆ. ಆರ್ಥಿಕ ಪರಿಸ್ಥಿತಿ ಏನಾಗುತ್ತಿದೆ ಎಂದು ನಾವು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಣಕಾಸಿನ ಕೊರತೆ ಕುರಿತು ಚರ್ಚೆ ನಡೆದಿದೆ. ಈ ಸರ್ಕಾರ ಬಂದ ಬಳಿಕ 2.95ರಷ್ಟು ಹಣಕಾಸಿನ ಕೊರತೆ ಜಾಸ್ತಿ ಆಗಿದೆ. ಅದು ಬಿಜೆಪಿ ಸರ್ಕಾರದಲ್ಲಿ 2.14ರಷ್ಟಿದ್ದರೆ, ಈಗ 2.95ಕ್ಕೆ ಏರಿದೆ. ಕೈಗಾರಿಕಾ ಬೆಳವಣಿಗೆ ವಿಷಯದಲ್ಲಿ ಇಡೀ ದೇಶದಲ್ಲಿ ಎಲ್ಲ ರಾಜ್ಯಗಳು ಸ್ಪರ್ಧೆಗಿಳಿದಿವೆ. ಕಳೆದ 20 ತಿಂಗಳಿನಿಂದ ಈ ರಾಜ್ಯ ಸರ್ಕಾರವು ಕೈಗಾರಿಕಾ ಬೆಳವಣಿಗೆ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದರ ಪರಿಣಾಮವಾಗಿ 2024-25ರಲ್ಲಿ ನಮ್ಮ ರಾಜ್ಯದ ಕೈಗಾರಿಕಾ ಬೆಳವಣಿಗೆಯು 5.8 ಶೇಕಡಾದಷ್ಟಿದೆ ಎಂದರು. ಬಂಡವಾಳ ಹೂಡಿಕೆಯು ಕೇವಲ ಹಾಳೆ ಮೇಲಿದೆಯೇ ಹೊರತು ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಕಳೆದ 20 ತಿಂಗಳಿನಲ್ಲಿ ಸರ್ಕಾರ ತಲೆ ಕೆಡಿಸಿಕೊಳ್ಳದ ಕಾರಣ ಕೈಗಾರಿಕಾ ಬೆಳವಣಿಗೆ ಕಡಿಮೆ ಆಗಿದೆ ಎಂದು ತಿಳಿಸಿದರು.
ಈ ಬಜೆಟ್ ಅವಲೋಕನ ಮಾಡಿದರೆ ಇದು ರಾಜ್ಯದ ಯಾವುದೇ ವರ್ಗದ ಜನರಿಗೆ ಸಂತೃಪ್ತಿ ತಂದಿಲ್ಲ ಎಂದರಲ್ಲದೆ, ನಾಡಿನ ಕೃಷಿಕರು, ಬಡವರು, ಮಹಿಳೆಯರು, ಯುವಕರು ಸೇರಿ ಎಲ್ಲರಿಗೂ ಈ ಬಜೆಟ್ ನಿರಾಸೆ ತಂದಿದೆ. ಶಿಕ್ಷಣ, ಆರೋಗ್ಯ ಸೇರಿ ಯಾವುದೇ ಆದ್ಯತಾ ಕ್ಷೇತ್ರಗಳಿಗೂ ಗಮನ ಹರಿಸಿಲ್ಲ ಎಂದು ಟೀಕಿಸಿದರು. ಮಡಿವಾಳರು, ಸವಿತಾ ಸಮಾಜ, ನೇಕಾರರು, ವಿಶ್ವಕರ್ಮ ಸಮುದಾಯ ಸೇರಿ ಕಾಯಕ ಸಮುದಾಯಕ್ಕೆ ಈ ಬಜೆಟ್ ಒತ್ತು ಕೊಟ್ಟಿಲ್ಲ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರವು ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದರು.