– ಕಾಂಗ್ರೆಸ್‍ನ ಮೂವರಿಂದ ಈ ಕುತಂತ್ರ
– ಆಪರೇಷನ್ ಕಮಲದ ನೆಪ ಹೇಳಿ ಜೆಡಿಎಸ್‍ಗೆ ಬೆದರಿಕೆ
ತುಮಕೂರು: ಆಪರೇಷನ್ ಕಮಲ ಎಂಬ ಬೆದರುಬೊಂಬೆ ಇಟ್ಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನ ಅಧಿಕಾರದಿಂದ ಕೆಳಗಿಳಿಸಲು ಹೊಂಚು ಹಾಕಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಎಚ್.ಡಿ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕೆಲ ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎಂಬ ಬೆದರು ಬೊಂಬೆ ಇಟ್ಕೊಂಡು ಕಾಂಗ್ರೆಸ್‍ನ ಮೂವರು ಹಿರಿಯ ಮುಖಂಡರು ಸಿಎಂ ಕುಮಾರಸ್ವಾಮಿ ವಿರುದ್ಧ ಹೊಂಚು ಹಾಕುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸ್ಥಾನಮಾನ ಪಡೆಯಲು ಕೈ ಪಡೆಯವರೇ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಬ್ಬರು ಸಚಿವರಾದರೆ ಇನ್ನಿಬ್ಬರು ಸಚಿವ ಸ್ಥಾನ ಸಿಗದೇ ಇದ್ದವರು ಈ ರೀತಿ ಹೊಂಚು ಹಾಕಿ ಬಿಜೆಪಿ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯುವುದನ್ನೇ ಕಾಯ್ತಾ ಇದ್ದಾರೆ. ಆದರೆ ಬಿಜೆಪಿ ಪಕ್ಷ ಸರ್ಕಾರವನ್ನ ಅಸ್ಥಿರಗೊಳಿಸುವ ಯಾವ ಪ್ರಯತ್ನವೂ ಮಾಡುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಆಪರೇಷನ್ ಕಮಲ ಎಂಬ ಭೂತ ಇಟ್ಟುಕೊಂಡು ಜೆಡಿಎಸ್ ನಾಯಕರನ್ನು ಬೆದರಿಸುತ್ತಿದ್ದಾರೆ. ಹೀಗೆ ಕುತಂತ್ರ ಮಾಡುತ್ತಿರುವ ಆ ಮೂವರು ಯಾರು ಅಂತಾ ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ಗುಡುಗಿದ್ದಾರೆ.
ಅಷ್ಟೇ ಅಲ್ಲದೆ ಸರ್ಕಾರದ ಆಡಳಿತ ಕೇವಲ ರಾಮನಗರ, ಹಾಸನ ಹಾಗೂ ಮಂಡ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾದಂತಿದೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೀತಿದೆ. ರಾಜ್ಯದ ಆಡಳಿತ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬಕ್ಕೆ ಸೀಮಿತವಾಗಿಬಿಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡ್ತೀವಿ ಎಂದು ವಿಜಯೇಂದ್ರ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv