– ಡಿಕೆಶಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದ ನಡುವೆ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ದಿಕ್ಕು ತಪ್ಪದಿರಲಿ ಎಂದು ಪೆನ್‍ಡ್ರೈವ್ ಜಟಾಪಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಟಕ್ಕರ್ ಕೊಟ್ಟಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸುವ, ಪ್ರತಿಭಟಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವಲ್ಲಿ ಎಂದಿಗೂ ರಾಜೀಯಾಗದ ದಾಖಲೆ ಇದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ನಾರಿಯರನ್ನು ಮಾತೆಯರು ಎಂದು ಗೌರವಿಸುವ ಸಂಸ್ಕøತಿ ಇದ್ದರೆ, ರಾಷ್ಟ್ರವನ್ನು ಭಾರತಮಾತೆ ಎಂದು ಪೂಜಿಸುವ ಸಂಸ್ಕಾರವಿದ್ದರೆ ಅದು ಬಿಜೆಪಿಯ ಧ್ಯೇಯದ ಮಡಿಲಿನಲ್ಲಿ ಮಾತ್ರ. ಮಹಿಳಾ ಶೋಷಣೆಯ ಕುರಿತು ಡಿ.ಕೆ ಶಿವಕುಮಾರ್ (D.K Shivakumar) ಅಂಥವರಿಂದ ಹೇಳಿಸಿಕೊಳ್ಳಬೇಕಾದ ದುರ್ಗತಿ ಬಿಜೆಪಿಗೆ (BJP) ಎಂದೂ ಬರುವುದಿಲ್ಲ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪೆನ್‍ಡ್ರೈವ್ ಹಿಂದೆ ಮಹಾನಾಯಕ ಇದ್ದಾರೆ- ಡಿಕೆಶಿ ವಿರುದ್ಧ ಹೆಚ್‍ಡಿಕೆ ಗರಂ
ಹಾಸನದ ಪೆನ್ ಡ್ರೈವ್ ಪ್ರಕರಣ ಸೇರಿದಂತೆ ನಾರಿಕುಲದ ಯಾವ ಬಗೆಯ ಶೋಷಣೆಯನ್ನೂ ನೋಡಿಕೊಂಡು ನಾವು ಮೌನವಹಿಸಿ ಕೂರುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಪ್ರಕರಣದ ಕುರಿತು ಸದ್ಯ ನೇಮಕವಾಗಿರುವ ಎಸ್‍ಐಟಿ ಶೀಘ್ರದಲ್ಲಿ ಸತ್ಯಾಸತ್ಯತೆಯನ್ನು ಹೊರತಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿಯ ಹೆಜ್ಜೆಯನ್ನಂತೂ ಇಟ್ಟಿಲ್ಲ. ಮಹಿಳೆಯರ ರಕ್ಷಣೆಗಾದರೂ ಆದ್ಯತೆ ನೀಡುವ ಯೋಗ್ಯತೆಯೂ ಅವರಿಗೆ ಇಲ್ಲವಾಗಿದೆ. ಬೆಳಗಾವಿಯಲ್ಲಿ ಹಾಡುಹಗಲೇ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಸಂದರ್ಭದಲ್ಲಿ ಬೆಳಗಾವಿಯಲ್ಲೇ (ಅಧಿವೇಶನದಲ್ಲಿ) ಇದ್ದ ಮುಖ್ಯಮಂತ್ರಿ, ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಲೂ ಭೇಟಿ ನೀಡದೇ ಕನಿಷ್ಠ ಸೌಜನ್ಯವನ್ನು ತೋರಿಸಿಲ್ಲ. ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕನಿಂದ ಹಾಡಹಗಲೇ ಅಮಾಯಕ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆಯಾದಾಗ ಹೇಗೆ ನಡೆದುಕೊಂಡರು ಎಂಬುದನ್ನು ಈ ರಾಜ್ಯದ ಜನತೆ ಗಮನಿಸಿದ್ದಾರೆ.
ಈ ಸರ್ಕಾರದ ಆಡಳಿತದಲ್ಲಿ ಸರಣಿ ರೂಪದಲ್ಲಿ ಸ್ತ್ರೀಕುಲದ ಮೇಲೆ ನಿರಂತರ ಶೋಷಣೆ, ದೌರ್ಜನ್ಯ ನಡೆಯುತ್ತಿದ್ದರೂ ಉಡಾಫೆತನ ಪ್ರದರ್ಶಿಸುವ ಕಾಂಗ್ರೆಸ್‍ಗೆ ಬಿಜೆಪಿಯತ್ತ ಬೊಟ್ಟುಮಾಡುವ ಯಾವ ನೈತಿಕತೆಯೂ ಇಲ್ಲ. ನಾಗರಿಕ ಸಮಾಜ ತಲೆತಗ್ಗಿಸುವ ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಸೇರಿದಂತೆ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆದು ಕ್ರಮ ಜರುಗಲಿ. ಇದರ ನಡುವೆ ನೇಹಾ ಹಿರೇಮಠ ಕಗ್ಗೊಲೆ ಪ್ರಕರಣದ ತನಿಖೆ ದಿಕ್ಕುತಪ್ಪದಿರಲಿ ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇವರಾಜೇಗೌಡಗೆ ಬಿಟ್ರೆ ʼಕೈʼ ಮುಖಂಡರಿಗೆ ನಾನು ವೀಡಿಯೋ ಕೊಟ್ಟಿಲ್ಲ: ಪ್ರಜ್ವಲ್ ಮಾಜಿ ಡ್ರೈವರ್