ಮೇಲ್ಮನೆಗೆ ವಿಜಯೇಂದ್ರ ಎಂಟ್ರಿ? ವಿಧಾನ ಪರಿಷತ್‌ ಒಂದು ಸ್ಥಾನಕ್ಕೆ ಬಿಎಸ್‌ವೈ ಪುತ್ರನ ಹೆಸರು ಅಂತಿಮ

Public TV
1 Min Read
vijayendra

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಮೇಲ್ಮನೆ ಎಂಟ್ರಿ ಬಹುತೇಕ ಖಚಿತವಾಗಿದೆ.

ವಿಧಾನ ಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು. ವಿಧಾನ ಪರಿಷತ್ 1 ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರನ್ನು ಶಿಫಾರಸು ಮಾಡಲಾಗಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು.

bs yediyurappa

ಕೋರ್‌ ಕಮಿಟಿ ಸಭೆಯಲ್ಲಿ ವಿಧಾನ ಪರಿಷತ್‌ ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಂತಿಮವಾಗಿದ್ದು, ಪರಿಷತ್ ಮೆಟ್ಟಿಲೇರಲು ವಿಜಯೇಂದ್ರಗೆ ಒಂದೇ ಮೆಟ್ಟಿಲು ಬಾಕಿ ಇದೆ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲೂ ಅವರ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯೇಂದ್ರ ಅವರಿಗೆ ಮಣೆ ಹಾಕಿರುವುದು ಬಿಜೆಪಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಯಡಿಯೂರಪ್ಪಗೆ ಈ ಮೊದಲೇ ಸಂದೇಶ ರವಾನೆ ಆಗಿತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಶುಕ್ರವಾರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಭೇಟಿ ವೇಳೆ ವಿಜಯೇಂದ್ರ ಹೆಸರು ಪ್ರಸ್ತಾಪಿಸಲು ಯೋಜನೆ ರೂಪಿಸಲಾಗಿತ್ತಾ ಎಂಬ ಚರ್ಚೆ ನಡೆಯುತ್ತಿದೆ.

BASAVARAJ BOMMAI

ಮಾಜಿ ಸಚಿವ ಲಕ್ಷ್ಮಣ್ ಸವದಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ನಿರ್ಮಲಾ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹೇಶ್ ಟೆಂಗಿನಕಾಯಿ, ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೆಸರುಗಳನ್ನು ಉಳಿದ ಸ್ಥಾನಗಳಿಗೆ ಶಿಫಾರಸು ಮಾಡಲಾಗಿದೆ. ಒಂದು ಸ್ಥಾನವನ್ನು ಸಿನಿಮಾ ಅಥವಾ ಕಲೆ ಕ್ಷೇತ್ರದಿಂದ ಜನಪ್ರಿಯತೆ ಇರುವ ಒಬ್ಬ ವ್ಯಕ್ತಿ ಆಯ್ಕೆ ಮಾಡಲು ನಿರ್ಧಾರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *