ಮೈಸೂರು: ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ. ಮುಖ್ಯಮಂತ್ರಿಗಳೇ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ವತಿಯಿಂದ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಇಂದು ಅವರು ಮಾತನಾಡಿದರು. ಯಡಿಯೂರಪ್ಪನವರ (Yediyurappa) ರಾಜಕೀಯ ನಿವೃತ್ತಿಯ ಮಾತನ್ನು ಹಿಂದಕ್ಕೆ ಪಡೆಯಿರಿ. ಮುಖ್ಯಮಂತ್ರಿಗಳೇ, ಸಾವಿರಾರು ಕೋಟಿ ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಎಸ್‌ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು: ಡಿಕೆಶಿಗೆ ಹೆಚ್‌ಡಿಕೆ ಪ್ರಶ್ನೆ
ಮುಡಾ ಹಗರಣದಲ್ಲಿ 5 ಸಾವಿರ ಕೋಟಿಯ ಅವ್ಯವಹಾರ ಆಗದೆ ಇದ್ದರೆ ನೀವ್ಯಾಕೆ ಸದನದಿಂದ ಓಡಿ ಹೋಗಿದ್ದೀರಿ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ವಿಪಕ್ಷಕ್ಕೆ ಗೊಡ್ಡು ಬೆದರಿಕೆ ಹಾಕಿದ್ದು ಯಾಕೆ? ಹಗರಣಗಳ ಕುರಿತು ಆರೋಪಿಸುವ ಮೊದಲು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿವರ ಕೊಡಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಅವರನ್ನು ಕಂಡರೆ ಇನ್ನೂ ನಿಮಗೆ ಭಯವೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಸಿಎಜಿ ಸಂಬಂಧ ಎಫ್‌ಐಆರ್, ಕುತಂತ್ರ ಮಾಡಿದ್ದನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರ ವಿರುದ್ಧ ಈ ಹೋರಾಟವಲ್ಲ; ಭ್ರಷ್ಟ ಮುಖ್ಯಮಂತ್ರಿಗಳ ವಿರುದ್ಧ ನಮ್ಮ ಹೋರಾಟ ಎಂದರಲ್ಲದೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಮ್ಮದು ಎಂದು ತಿಳಿಸಿದರು. ನಿಂಗ ಅವರ ಜಮೀನು ಅಕ್ರಮ ಖರೀದಿ, ಅದನ್ನು ಸಿದ್ದರಾಮಯ್ಯನವರ ಶ್ರೀಮತಿಗೆ ನೀಡಿದ್ದನ್ನು ಪ್ರಸ್ತಾಪಿಸಿದರು. ಇದನ್ನೂ ಓದಿ: ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್
ನಮ್ಮ ಹೋರಾಟ ನಿರಂತರವಾಗಿರಲಿದೆ. ನಮ್ಮ ಹೋರಾಟವನ್ನು ಯಾರೂ ಹತ್ತಿಕ್ಕಲು ಅಸಾಧ್ಯ ಎಂದು ಪ್ರಕಟಿಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
ಬಡವರು, ರೈತರನ್ನು ಕಾಪಾಡುವ ಇಚ್ಛಾಶಕ್ತಿ ನಿಮ್ಮಲ್ಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಮನೆ ಬಿದ್ದ ಸಂದರ್ಭದಲ್ಲಿ 5 ಲಕ್ಷ ಕೊಟ್ಟಿತ್ತು. ಈ ಸರ್ಕಾರ 1 ಲಕ್ಷ ಕೊಡುವುದಾಗಿ ಘೋಷಿಸಿದೆ. ಆದರೆ, ಅದನ್ನೂ ಕೊಟ್ಟಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ 2 ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಅಂಗವಿಕಲರಿಗೆ 6 ತಿಂಗಳಿಂದ ಮಾಸಾಶನ ಕೊಟ್ಟಿಲ್ಲ ಎಂದು ಟೀಕಿಸಿದರು.
15 ತಿಂಗಳುಗಳಲ್ಲಿ ಯಾವುದೇ ಹೊಸ ಅಭಿವೃದ್ಧಿ ಯೋಜನೆಯನ್ನು ಘೋಷಿಸಿಲ್ಲ. ದರಿದ್ರ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಒಂದೆಡೆ ಭೀಕರ ಬರಗಾಲ. 1,500 ರೈತರ ಆತ್ಮಹತ್ಯೆ ಮಾಡಿಕೊಂಡರಲ್ಲವೇ? ಇದೇನಾ ನಿಮ್ಮ ರೋಲ್ ಮಾಡೆಲ್ ಸರ್ಕಾರ ಎಂದು ಪ್ರಶ್ನಿಸಿದರು. ವಿಪಕ್ಷವಾಗಿ ಸವಾಲು ಹಾಕಿದರೆ ನಮಗೇ ಧಮ್ಕಿ ಹಾಕುತ್ತೀರಾ? ಎಂದರಲ್ಲದೆ, ಚಮಚಾಗಿರಿ ಮಾಡುವ ವಿಪಕ್ಷ ನಮ್ಮದಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ
ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಪೊಲೀಸರನ್ನು ಉಪಯೋಗಿಸಿ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದೀರಿ. ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾದ ಹಗರಣ ಕುರಿತು ಚರ್ಚಿಸಲು ಮುಂದಾದರೆ, ನಿಲುವಳಿ ಸೂಚನೆ ಮಂಡಿಸಿದರೆ, ವಿಪಕ್ಷದ ಕಿವಿಗೆ ಹೂ ಮುಡಿಸುವ ಕೆಲಸ ಮಾಡಿದರು ಎಂದು ಆಕ್ಷೇಪಿಸಿದರು.
ಅಧಿವೇಶನದಲ್ಲಿ ಉತ್ತರ ಕೊಡಲಾಗದೆ ಓಡಿ ಹೋದ ರಣಹೇಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಟೀಕಿಸಿದರು. ಇದನ್ನು ನಾನು ಹೇಳುತ್ತಿಲ್ಲ. ರಾಜ್ಯದ ಜನತೆ ಹೇಳುತ್ತಾರೆ ಎಂದರು. ಇದೇ 3ರಿಂದ ಆರಂಭವಾದ ಮೈಸೂರು ಚಲೋ ಪಾದಯಾತ್ರೆ ಯಶಸ್ವಿಯಾಗಿದೆ. ಭ್ರಷ್ಟಾಚಾರರಹಿತ ಸರ್ಕಾರ, ಅಹಿಂದ ಸಮುದಾಯಕ್ಕೆ ಸೌಕರ್ಯ ಕೊಡುವ ಭರವಸೆ ನೀಡಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಪಕ್ಷವು ಅಭಿವೃದ್ಧಿರಹಿತ, ಭ್ರಷ್ಟಾಚಾರಸಹಿತ ಸರ್ಕಾರವನ್ನು ನೀಡಿದೆ ಎಂದು ಆಕ್ಷೇಪಿಸಿದರು.