ಶಿವಮೊಗ್ಗ: ಈಗ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ. ಅವರೇ ಆಪರೇಷನ್ ಮಾಡಿ ಎಂದು ಮುಂದೆ ಬರುತ್ತಿದ್ದಾರೆ. ದೋಸ್ತಿ ಪಕ್ಷದ ನಾಯಕರ ಗೊಂದಲಗಳಿಂದಾಗಿ ಸರ್ಕಾರ ಬಿದ್ದರೆ ಅಚ್ಚರಿಯೇನಿಲ್ಲ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟಾಂಗ್ ಕೊಟ್ಟಿದ್ದಾರೆ.
ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ. ಅವರೇ ಆಪರೇಷನ್ ಮಾಡಿ ಎಂದು ಮುಂದೆ ಬರುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಹೊರಟ್ಟಿ ಅವರು ವಿಧಾನಸಭೆ ವಿಸರ್ಜನೆ ಮಾಡಿ ಎಂದಿದ್ದಾರೆ. ಅವರ ಗೊಂದಲಗಳಿಂದಾಗಿ ಸರ್ಕಾರ ಬಿದ್ದರೆ ಅಚ್ಚರಿ ಏನಿಲ್ಲ ಎಂದು ಹೇಳಿದರು.
Advertisement
Advertisement
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ನಿರೀಕ್ಷೆಯಂತೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಸಂಘಟನೆಯಲ್ಲಿ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷ ಬದಲಾವಣೆ ಪ್ರಕ್ರಿಯೆ ಸಹಜವಾಗಿಯೇ ನಡೆಯುತ್ತದೆ. ಬಿಜೆಪಿ ಪ್ರಜಾಪ್ರಭುತ್ವ ತತ್ವವನ್ನು ಅಳವಡಿಸಿಕೊಂಡಿರುವ ಪಕ್ಷ. ಈ ಹಿನ್ನಲೆಯಲ್ಲಿ ಪಕ್ಷದ ನಾಯಕರುಗಳ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.
Advertisement
Advertisement
ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿವೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಸಮೀಕ್ಷೆಗಳು ಮಾಹಿತಿ ನೀಡಿವೆ. ನೂರಕ್ಕೆ ನೂರರಷ್ಟು ಈ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಲಿವೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಹಾಕಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಅದೆಲ್ಲವೂ ಸುಳ್ಳಾಗಲಿದೆ ಎಂಬುದನ್ನ ಸಮೀಕ್ಷೆಗಳು ಹೇಳುತ್ತಿವೆ ಎಂದು ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.