ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.
ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.
ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.
ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv