ಕಲಬುರಗಿ: ಕೊರೊನಾ ಸೋಂಕಿತ ಮೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳು ಸೇರಿ ಹೊಸದಾಗಿ 4 ಮಂದಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಗಂಟಲು ದ್ರವ್ಯ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ 1 ತಿಂಗಳು ಅಘೋಷಿತ ಬಂದ್ ಇರಲಿದೆ ಎಂದು ಡಿಸಿ ಬಿ. ಶರತ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಇಎಸ್‍ಐಸಿ ಮೆಡಿಕಲ್ ಕಾಲೇಜಿನಲ್ಲಿ ಈ ಹಿಂದಿನ ಕೊರೊನಾ ಶಂಕಿತ ಪ್ರಕರಣಗಳ 3 ನೆಗೆಟಿವ್, 1 ಪಾಸಿಟಿವ್ ರೋಗಿ ಹಾಗೂ ಹೊಸದಾಗಿ ರೋಗದ ಲಕ್ಷಣ ಕಾಣಿಸಿಕೊಂಡ 4 ರೋಗಿಗಳಿಗೆ ಪ್ರತ್ಯೇಕವಾಗಿ ಐಸೋಲೇಷನ್ಸ್ ವಾರ್ಡ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮೃತ ವ್ಯಕ್ತಿ ಸಂಪರ್ಕ ಹೊಂದಿದ್ದರು ಎಂದು ಗುರುತಿಸಿದ 71 ವ್ಯಕ್ತಿಗಳು, ಎರಡನೇ ಸಂಪರ್ಕ ಹೊಂದಿದ 238 ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ 61 ವ್ಯಕ್ತಿಗಳು ಸೇರಿದಂತೆ ಒಟ್ಟಾರೆ 370 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
370 ಜನರಲ್ಲಿ 8 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಾ ಕೇಂದ್ರದಲ್ಲಿ 5 ಐಸೋಲೇಶನ್ ವಾರ್ಡ್ ಸ್ಥಾಪಿಸಲಾಗಿದೆ. ಜಿಮ್ಸ್ ನಲ್ಲಿ 12 ಮತ್ತು ಇಎಸ್‍ಐಸಿನಲ್ಲಿ 50 ಐಸೋಲೇಷನ್ ವಾರ್ಡ್‍ಗಳಿವೆ. ಇದರ ಜೊತೆಯಲ್ಲಿ 200 ಕ್ವಾರಂಟೈನ್ ವಾರ್ಡ್ ಸಹ ಇದ್ದು, ಇಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ 61 ಜನ ವಿದೇಶದಿಂದ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇದಕ್ಕಾಗಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 08472-278604/278677 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಡಿಸಿ ಮನವಿ ಮಾಡಿದರು.
ಅಷ್ಟೇ ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಸುದ್ದಿ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಬಿ. ಶರತ್ ಅವರು ಕೋರಿಕೊಂಡರು.