ಬೆಂಗಳೂರು: ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರು ಮೆಗಾ ಟಾಂಗ್ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಆಪ್ತ ತಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾಗೆ ರಹಸ್ಯವಾಗಿ ಪತ್ರ ರವಾನಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯ ಬಿಜೆಪಿಯಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಯಡಿಯೂರಪ್ಪ ನಂತರದ ನಾಯಕ ಯಾರು ಹೇಳಿ ಎಂದು ಅನಾಮಧೇಯ ಪತ್ರ ಬಂದಿತ್ತು. ಯಡಿಯೂರಪ್ಪ ವಿರುದ್ಧದ ಅನಾಮಧೇಯ ಪತ್ರಕ್ಕೆ ಬಿಎಸ್‍ವೈ ಟೀಂ ಎರಡು ಪುಟಗಳ ರಹಸ್ಯ ಪತ್ರ ಬರೆದು ಹೈಕಮಾಂಡ್‍ಗೆ ರವಾನಿಸುವ ಮೂಲಕ ಕೌಂಟರ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ರಹಸ್ಯ ಪತ್ರದ ಸಾರಾಂಶ ಏನು?
ಯಡಿಯೂರಪ್ಪಗೆ ವಯಸ್ಸಾಗಿದೆ, ಆಡಳಿತ ನಡೆಸಲು ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಇದನ್ನು ಸೃಷ್ಟಿಸಿರಬಹುದು. ಅನಾಮಧೇಯ ಪತ್ರದ ಮೂಲಕ ಅಪಪ್ರಚಾರ ಮಾಡಿದವರ ಬಗ್ಗೆ ಪಕ್ಷ ಎಚ್ಚರಿಕೆ ಕೊಡಬೇಕು. ಮುಖ್ಯಮಂತ್ರಿ ಆಗುವ ಮೊದಲು ಇಲ್ಲದಿದ್ದ ವಯಸ್ಸು ಈಗ ಎಲ್ಲಿಂದ ಬರುತ್ತೆ? ವಿಶೇಷ ಪ್ರಕರಣ ಎಂದೇ ಯಡಿಯೂರಪ್ಪ ಸಿಎಂ ಆಗಿದ್ದು ಎನ್ನುವ ಅರಿವು ಎಲ್ಲರಿಗೂ ಇದೆ. ಹೀಗಿರುವಾಗ ಪದೇ ಪದೇ ಗೊಂದಲ ಸೃಷ್ಟಿಸುವ ಕೆಲಸ ಆಗುತ್ತಿದೆ. ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನನ್ನು ಹೆಸರಿಸಲಿ. ಯಡಿಯೂರಪ್ಪ ನಂತರದ ನಾಯಕತ್ವ ಯಾರದ್ದು ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. ಯಡಿಯೂರಪ್ಪ ಕೆಳಗಿಳಿದರೆ ಈ ನಾಯಕ ಮುಂದುವರಿಸುತ್ತಾನೆ ಎನ್ನುವ ವಿಶ್ವಾಸವೇ ಪಕ್ಷದಲ್ಲಿ ಇಲ್ಲ. ಇನ್ನು ಯಡಿಯೂರಪ್ಪಗೆ ವಯಸ್ಸಾಗಿರಬಹುದು, ಆದ್ರೆ ಅನಾರೋಗ್ಯ ಇಲ್ಲ. ಪಕ್ಷಕ್ಕೆ ನೀಡಿದ ಕೊಡುಗೆಯನ್ನೇ ಪರಿಗಣಿಸಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರನ್ನು ಕೇಂದ್ರ ಸರ್ಕಾರದ ಸಂಪುಟದಲ್ಲಿ ಉಳಿಸಿಕೊಂಡಿದ್ದನ್ನು ಗಮನಕ್ಕೆ ತರುತ್ತೇವೆ. ಯಡಿಯೂರಪ್ಪ ಮತ್ತೊಂದು ಅವಧಿಗೆ ಆಸೆಯನ್ನು ಪಟ್ಟಿಲ್ಲ. ಹೀಗಿರುವಾಗ ಪೂರ್ಣಾವಧಿ ತನಕ ಸಿಎಂ ಆಗಿ ಕೆಲಸ ಮಾಡಲು ಹೈಕಮಾಂಡ್ ಬೆಂಬಲ ಕೊಡಬೇಕು. ಅನಾಮಧೇಯ ಪತ್ರ ಸೃಷ್ಟಿಸುವ ವಿರೋಧಿಗಳಿಗೆ ಸಂದೇಶ ರವಾನಿಸಿ. ಇಲ್ಲದಿದ್ದರೆ ಪಕ್ಷ, ಸರ್ಕಾರ ಎರಡಕ್ಕೂ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.